ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಲು ಬಿಜೆಪಿಗೆ ಒಂದು ಅವಕಾಶ ಕೊಡಿ. ಭಯ, ಭ್ರಷ್ಟಾಚಾರ ಹಾಗೂ ದುರಾಡಳಿತವನ್ನು ಉತ್ತಮ ಆಡಳಿತದೊಂದಿಗೆ ಬದಲಾವಣೆ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ.
ಕೋಲ್ಕತ್ತಾದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ಅವರು, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣಾ ಲಾಭಕ್ಕಾಗಿ ಬಾಂಗ್ಲಾದೇಶಿಗಳ ಒಳನುಸುಳುವಿಕೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನುಸುಳುಕೋರರನ್ನು ಗುರುತಿಸುವುದಷ್ಟೇ ಅಲ್ಲದೇ, ಅವರನ್ನು ಓಡಿಸುವ ಕೆಲಸ ಮಾಡುತ್ತದೆ ಎಂದು ಭರವಸೆ ನೀಡಿದರು.
ಬಂಗಾಳದ ಜನರು ಒಳನುಸುಳುವಿಕೆಯಿಂದ ಆತಂಕಗೊಂಡಿದ್ದಾರೆ. ನಾವು ಒಳನುಸುಳುವವರನ್ನು ಗುರುತಿಸುವುದಲ್ಲದೇ ಅವರನ್ನು ಓಡಿಸುತ್ತೇವೆ. ಮಮತಾ ಬ್ಯಾನರ್ಜಿ ಚುನಾವಣಾ ಲಾಭಕ್ಕಾಗಿ ಬಾಂಗ್ಲಾದೇಶಿಗಳ ಒಳನುಸುಳುವಿಕೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರ ನಮಗೆ ಭೂಮಿ ನೀಡದ ಕಾರಣ ನಾವು ಬಾಂಗ್ಲಾದೇಶ ಗಡಿಯ ಬೇಲಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.





