ಹೊಸದಿಲ್ಲಿ : ಪಾಕಿಸ್ತಾನ ಪ್ರಜೆಗಳ ಜೊತೆಗೆ ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ ಮತ್ತು ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಹರಿಯಾಣದ ಹಿಸಾರ್ ಮೂಲದ ಮಹಿಳಾ ಪ್ರಯಾಣ ಬ್ಲಾಗರ್ ಒಬ್ಬರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ ಈ ವಾರ ಹರಿಯಾಣದಲ್ಲಿ ಬಂಧಿಸಿರುವ ಮೂರನೇ ಪ್ರಕರಣ ಇದಾಗಿದೆ. ಹಿಸಾರ್ ನಿವಾಸಿಯಾಗಿರುವ ಟ್ರಾವೆಲ್ ಬ್ಲಾಗರ್ ಜ್ಯೋತಿ ಮಲ್ಹೋತ್ರಾ ಅವರನ್ನು ಪಾಕಿಸ್ತಾನಿ ಪ್ರಜೆಗಳ ಜೊತೆಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿರುವುದನ್ನು ಒಪ್ಪಿಕೊಂಡ ನಂತರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಹಿಳೆಯ ವಿರುದ್ಧ 1923 ರ ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ 3 ಮತ್ತು 5 ಮತ್ತು ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯ ಸೆಕ್ಷನ್ 152 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸದ್ಯ ಅವರನ್ನು ಐದು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ. ಜ್ಯೋತಿ ಮಲ್ಹೋತ್ರಾ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹಿಸಾರ್ ಪೊಲೀಸ್ ವಕ್ತಾರ ವಿಕಾಸ್ ಕುಮಾರ್ ತಿಳಿಸಿದ್ದಾರೆ. ಸಬ್ ಇನ್ಸ್‌ಪೆಕ್ಟರ್ ಸಂಜಯ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಹಿಸಾರ್ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಎಫ್‌ಐಆರ್ ಪ್ರಕಾರ, ಬ್ಲಾಗರ್ 2023 ರಲ್ಲಿ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ಗೆ ಭೇಟಿ ನೀಡಿದಾಗ, ಅಲ್ಲಿ ಅವರು ನವದೆಹಲಿಯ ಪಾಕಿಸ್ತಾನ ಹೈಕಮಿಷನ್ (ಪಿಎಚ್‌ಸಿ) ಸಿಬ್ಬಂದಿ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಅವರನ್ನು ಸಂಪರ್ಕಿಸಿದ್ದರು.
ಪ್ರಸ್ತುತ ಬಂಧನಕ್ಕೆ ಒಳಗಾಗಿರುವ ಮಹಿಳೆಯೂ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಜೊತೆ ಸಂಪರ್ಕದಲ್ಲಿದ್ದರು. 2023 ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಮಯದಲ್ಲಿ, ಅಲಿ ಎಹ್ವಾನ್ ಅವರನ್ನು ಭೇಟಿಯಾದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ ನನ್ನ ವಾಸ್ತವ್ಯ ಮತ್ತು ಪ್ರಯಾಣವನ್ನು ಖಚಿತಪಡಿಸಿಕೊಂಡು ಎಹ್ವಾನ್ ಅವರನ್ನು ಪಾಕಿಸ್ತಾನಿ ಭದ್ರತಾ ಮತ್ತು ಗುಪ್ತಚರ ಅಧಿಕಾರಿಗಳಿಗೆ ಪರಿಚಯಿಸಿದರು, ಅಲ್ಲಿ ಶಕೀರ್ ಮತ್ತು ರಾಣಾ ಶಹಬಾಜ್ ಅವರನ್ನು ಸಹ ಭೇಟಿಯಾಗಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಲಾಗಿದೆ.





