ನವದೆಹಲಿ: ಒಂದೂವರೆ ದಶಕ ಕಳೆದರೂ ಜನಗಣತಿ ನಡೆಸದೇ ಇರುವುದರಿಂದ ದೇಶದ 14 ಕೋಟಿ ಮಂದಿಗೆ ಆಹಾರ ಭದ್ರತೆ ಯೋಜನೆ ನಿರಾಕರಿಸಿದಂತಾಗಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸೋನಿಯಾ ಗಾಂಧಿ, 2013ರಲ್ಲಿ ಯುಪಿಎ ಸರ್ಕಾರ ಜಾರಿ ಮಾಡಿದ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ, ದೇಶದ ಬಡವರ ಹಸಿವು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕೋವಿಡ್-19 ಸಂದರ್ಭದಲ್ಲಿ ಲಕ್ಷಾಂತರ ಕುಟುಂಬಗಳಿಗೆ ಆಸರೆಯಾಗಿದೆ ಎಂದರು.
ಪ್ರತಿ ಹತ್ತು ವರ್ಷಗಳಿಹೊಮ್ಮೆ ನಡೆಯಬೇಕಿದ್ದ ಜನಗಣತಿ ಒಂದೂವರೆ ದಶಕ ಕಳೆದರೂ ನಡೆದಿಲ್ಲ. ಈ ಬಾರಿಯೂ ಕೂಡ ಜನಗಣತಿ ನಡೆಯುವುದಿಲ್ಲ ಎಂಬುದು ಇವರು ಮಂಡಿಸಿದ ಬಜೆಟ್ ಅಂಶಗಳಿಂದ ತಿಳಿಯುತ್ತದೆ.
ಜನಗಣತಿ ನಡೆಯದೆ ಇರುವುದರಿಂದ ಸುಮಾರು 14 ಕೋಟಿ ಅರ್ಹ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿ (ಎನ್‌ಎಫ್‌ಎಸ್‌ಎ) ಹಕ್ಕು ನಿರಾಕರಿಸಲಾಗುತ್ತಿದೆ. 2011ರ ಜನಗಣತಿಯ ಅನ್ವಯ ಸುಮಾರು 81.4 ಕೋಟಿ ಜನರು ಈ ಸೌಲಭ್ಯಕ್ಕೆ ಅರ್ಹತೆ ಹೊಂದಿದ್ದಾರೆ ಎಂದು ತಿಳಿಸಿದರು.





