ಚೆನ್ನೈ: ನೆರೆಯ ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ ಜೋರಾಗಿದ್ದು, ಚೆನ್ನೈ ನಗರದ 134 ಸ್ಥಳಗಳು ಸಂಪೂರ್ಣ ಜಲಾವೃತವಾಗಿದೆ.
ಫೆಂಗಲ್ ಚಂಡಮಾರುತದ ಪರಿಣಾಮ ತಮಿಳುನಾಡಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಭಾರೀ ಮಳೆಯಿಂದ ಇದುವರೆಗೂ ಚೆನ್ನೈನಲ್ಲಿ ಬೃಹದಾಕಾರದ ಒಂಭತ್ತು ಮರಗಳು ಧರೆಗುರುಳಿವೆ.
ಪಾಲಿಕೆಯು 329 ಸ್ಥಳಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆದಿದ್ದು, ಅವುಗಳಿಗೆ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಫೆಂಗಲ್ ಚಂಡಮಾರುತ ಇಂದು ಉತ್ತರ ತಮಿಳುನಾಡು-ಪುದುಚೇರಿ ಕರಾವಳಿಯ ನಡುವೆ ವಾಯುಭಾರ ಕುಸಿತವನ್ನುಂಟುಮಾಡಿದ್ದು ಪರಿಣಾಮ ಗಂಟೆಗೆ 90 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.
ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ ನಾಳೆಯು ಮಳೆ ಮುಂದುವರಿಯಲಿದ್ದು, ಇದು ಉತ್ತರ ಕರಾವಳಿ ತಮಿಳುನಾಡು ಹಾಗೂ ಪುದುಚೇರಿಯ ಕೆಲವು ಭಾಗಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಜನರು ಎಚ್ಚರಿಕೆಯಿಂದ ಇರಬೇಕು. ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಇನ್ನು ಭಾರೀ ಗಾಳಿ ಹಾಗೂ ಮಳೆಯಾಗುತ್ತಿರುವ ಪರಿಣಾಮ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಜನತೆ ಕಗ್ಗತ್ತಲಿನಲ್ಲಿಯೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.