ಕಾಬುಲ್: ಆಫ್ಘಾನಿಸ್ತಾನದಲ್ಲಿ ಭಾನುವಾರ ರಾತ್ರಿ ಸಂಭವಿಸಿದ 6.0 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ 622 ಮಂದಿ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಸ್ಥಳೀಯ ಕಾಲಮಾನ ರಾತ್ರಿ 11.47ಕ್ಕೆ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರ ಬಿಂದುವು ಆಗ್ನೇಯ ಆಫ್ಘಾನಿಸ್ತಾನದಲ್ಲಿ 160 ಕಿ.ಮೀ ಆಳ ಇತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಭೂಕಂಪನದಿಂದ ಕುನಾರ್ ಪ್ರಾಂತ್ಯದ ಮೂರು ಹಳ್ಳಿಗಳು ಸಂಪೂರ್ಣವಾಗಿ ನೆಲಸಮಗೊಂಡಿವೆ. ಇನ್ನೂ ಹಲವಾರು ಹಳ್ಳಿಗಳಲ್ಲಿ ಭಾರೀ ಹಾನಿ ಸಂಭವಿಸಿದೆ. ಒಂದೇ ಗ್ರಾಮದಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ. ಸಾವು-ನೋವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಆಫ್ಘಾನ್ ಆರೋಗ್ಯ ಸಚಿವಾಲಯ ವಕ್ತಾರ ಶರಫತ್ ಜಮಾನ್ ತಿಳಿಸಿದ್ದಾರೆ.
ತೀವ್ರ ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇಲ್ಲಿಯವರೆಗೆ ಬೇರೆ ದೇಶಗಳು ರಕ್ಷಣಾ ಅಥವಾ ಪರಿಹಾರ ಕಾರ್ಯಗಳಿಗೆ ಬೆಂಬಲ ನೀಡಲು ಮುಂದೆ ಬಂದಿಲ್ಲ ಎಂದು ಆಫ್ಘಾನಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರರು ತಿಳಿಸಿದ್ದಾರೆ.





