ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಬಿಜೆಪಿ ಗೆಲುವು ಸಾಧಿಸಿದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ದೆಹಲಿ ಬಿಜೆಪಿ ಅಧ್ಯಕ್ಷ ವಿರೇಂದ್ರ ಸಚ್ ದೇವ್ ಅವರು, ದೆಹಲಿಯಲ್ಲಿ ಯಾರು ಸಿಎಂ ಆಗಬೇಕು ಎಂಬುದನ್ನು ಕೇಂದ್ರ ನಾಯಕತ್ವ ನಿರ್ಧರಿಸಲಿದೆ ಎಂದರು.
ಇಲ್ಲಿಯವರೆಗಿನ ಫಲಿತಾಂಶಗಳು ನಮ್ಮ ನಿರೀಕ್ಷೆಯಂತೆಯೇ ಇವೆ. ಹೀಗಿದ್ದೂ ನಾವು ಅಂತಿಮ ಫಲಿತಾಂಶದವರೆಗೂ ಕಾಯುತ್ತೇವೆ ಎಂದು ತಿಳಿಸಿದರು.
ಬಿಜೆಪಿಯ ಅಭ್ಯರ್ಥಿಗಳು ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸಿದರು ಹಾಗೂ ದಿಲ್ಲಿಯ ಮತದಾರರು ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಆಯ್ಕೆ ಮಾಡಿಕೊಂಡರು. ದಿಲ್ಲಿಯ ಜನತೆಗೆ ಅಭಿವೃದ್ಧಿಯ ಮಾದರಿ ಬೇಕಿದ್ದರಿಂದ ಅವರೆಲ್ಲಾ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪ್ರತಿಪಾದಿಸಿದರು.
ದಿಲ್ಲಿಯಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಫಲಿತಾಂಶವು ಪ್ರಧಾನಿ ಮೋದಿಯ ದೂರದೃಷ್ಟಿಯ ಫಲ ಎಂದು ಹೇಳಲು ನಮಗೆ ಯಾವುದೇ ಮುಜುಗರವಿಲ್ಲ. ದಿಲ್ಲಿಯು ಸುಭದ್ರ ಹಾಗೂ ಸ್ಥಿರ ಸರ್ಕಾರ ಪಡೆಯುವುದನ್ನು ನಾವು ಖಾತರಿಪಡಿಸುತ್ತೇವೆ ಎಂದು ಭರವಸೆ ನೀಡಿದರು.





