ನವದೆಹಲಿ: ಎರಡು ದಿನಗಳ ಹಿಂದೆ ರಾಷ್ಟ್ರ ರಾಜಧಾನಿಯಲ್ಲಿರುವ ತಮ್ಮ ಅಧಿಕೃತ ನಿವಾಸದ ಹೊರಗೆ ನಾಮಫಲಕ ಧ್ವಂಸ ಬಗ್ಗೆ ಎಐಎಂಐಎಂ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಬಲಪಂಥೀಯ ಸಂಘಟನೆಗಳ ಸದಸ್ಯರು ಎನ್ನಲಾದ ಕೆಲವು ಅಪರಿಚಿತ ದುಷ್ಕರ್ಮಿಗಳು ಗುರುವಾರ ದೆಹಲಿಯ ಲುಟೈನ್‌ನ ಅಶೋಕ ರಸ್ತೆಯಲ್ಲಿರುವ ಓವೈಸಿ ನಿವಾಸದ ಹೊರಗೆ ಇರುವ ಸಂಸದರ ನಾಮಫಲಕಕ್ಕೆ ಕಪ್ಪು ಬಣ್ಣ ಬಳಿದಿದ್ದಾರೆ.
ದೆಹಲಿ ಪೊಲೀಸ್ ಅಧಿಕಾರಿಯ ಪ್ರಕಾರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143, 147, 506 ಮತ್ತು 153ರ ಅಡಿಯಲ್ಲಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಗಮನಾರ್ಹವೆಂದರೆ, ಓವೈಸಿ ಅವರ ಮನೆ ಮೇಲೆ ದಾಳಿ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ದೆಹಲಿ ಪೊಲೀಸ್ ಪ್ರಧಾನ ಕಚೇರಿಯ ಎದುರು ಇರುವ ಹೈದರಾಬಾದ್ ಸಂಸದರ ನಿವಾಸವು ಬಲಪಂಥೀಯ ಸಂಘಟನೆಗಳ ಸದಸ್ಯರಿಂದ ವಿಧ್ವಂಸಕ ಕೃತ್ಯಗಳಿಗೆ ಒಳಗಾಗಿತ್ತು.