ಹೊಸದಿಲ್ಲಿ: ಮುಂದಿನ 50 ವರ್ಷಗಳಲ್ಲಿ ವಿಶ್ವವು ಅನಿಯಂತ್ರಿತ ನಗರೀಕರಣಕ್ಕೆ ಸಾಕ್ಷಿಯಾಗಲಿದ್ದು, ನಗರ ಪ್ರದೇಶಗಳ ಜನಸಂಖ್ಯೆ 100 ಕೋಟಿಯಷ್ಟು ಹೆಚ್ಚಲಿದೆ. ವಿಶ್ವಕ್ಕೆ ಇನ್ನೂ 14 ಹೊಸ ಮಹಾನಗರಗಳು ಸೇರ್ಪಡೆಯಾಗಲಿವೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಮುಂದಿನ 50 ವರ್ಷಗಳಲ್ಲಿ ವಿಶ್ವವು ಅನಿಯಂತ್ರಿತ ನಗರೀಕರಣಕ್ಕೆ ಸಾಕ್ಷಿಯಾಗಲಿದೆ ಎಂದಿರುವ ವರದಿಯೊಂದು, ದೇಶದ ದಿಲ್ಲಿ, ಕೋಲ್ಕೊತಾ, ಅಹಮದಾಬಾದ್ ನಗರಗಳು ಅಡ್ಡಾದಿಡ್ಡಿ ಬೆಳವಣಿಗೆ ಕಾಣಲಿದೆ ಎಂದು ಹೇಳಿದೆ.
ಆದರೆ, ಈ ಮಹಾನಗರಗಳು ಭವಿಷ್ಯದ ಅಸ್ಥಿರತೆಯನ್ನು ಎದುರಿಸಲಿದ್ದು ಆಹಾರ ಅಭದ್ರತೆ, ಸಂಘರ್ಷ, ಹೆಚ್ಚಿನ ಅಪರಾಧ, ಬರಗಾಲ ಮತ್ತು ನೆರೆಯಂತಹ ಹವಾಮಾನ ಸಂಬಂಧಿತ ವೈಪರೀತ್ಯಗಳು ಈ ನಗರಗಳನ್ನು ಕಾಡಲಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಇಂತಹ ವಿಶ್ವದ ಅಸ್ಥಿರ ನಗರಗಳ ಪಟ್ಟಿಯಲ್ಲಿ ಭಾರತದ ದಿಲ್ಲಿ, ಕೋಲ್ಕೊತಾ ಹಾಗೂ ಅಹಮದಾಬಾದ್ ಸಹ ಸ್ಥಾನ ಪಡೆಯಲಿದ್ದು, ಇವುಗಳ ಜನಸಂಖ್ಯೆ ಕನಿಷ್ಠ ಶೇ. 50ರಷ್ಟು ಹೆಚ್ಚಳವಾಗಲಿದೆ.





