ಹೊಸದಿಲ್ಲಿ : ಇಲ್ಲಿನ ಕೆಂಪು ಕೋಟೆ ಬಳಿ ನ. 10ರಂದು ಸಂಭವಿಸಿದ ಕಾರು ಸ್ಛೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಮತ್ತೆ ನಾಲ್ವರು ಪ್ರಮುಖ ಸಂಚುಕೋರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಕಾಶ್ಮೀರದಲ್ಲಿ ಆರು ಜನರನ್ನು ಬಂಧಿಸಿದಂತಾಗಿದೆ.
ಪುಲ್ವಾಮಾದ ಡಾ. ಮುಜಮ್ಮಿಲ್ ಶಕೀಲ್ ಗನಾಯಿ, ಅನಂತನಾಗ್ ಜಿಲ್ಲೆಯ ಡಾ.ಆದೀಲ್ ಅಹ್ಮದ್, ಲಖನೌದ ಡಾ.ಶಾಹೀನ್ ಸಯೀದ್, ಶೋಪಿಯಾನ್ ಜಿಲ್ಲೆಯ ಮುಫ್ತಿ ಇರ್ಫಾನ್ ಅಹ್ಮದ್ ವಾಗೆಯನ್ನು ಶ್ರೀನಗರದಲ್ಲಿ ವಶಕ್ಕೆ ಪಡೆಯಲಾಯಿತು.
ನಾಲ್ವರ ಬಂಧನಕ್ಕೆ ಸಂಬಂಧಿಸಿದಂತೆ, ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ನೀಡಿದ ಆದೇಶವನ್ನು ಶ್ರೀನಗರದ ನ್ಯಾಯಾಲಯಕ್ಕೆ ಸಲ್ಲಿಸಿದ ಎನ್‌ಐಎ ಅಧಿಕಾರಿಗಳು, ನಾಲ್ವರನ್ನೂ ತಮ್ಮ ವಶಕ್ಕೆ ಪಡೆದುಕೊಂಡರು.
ಈ ನಾಲ್ವರು ಕೂಡ ಕೆಂಪುಕೋಟೆ ಸಮೀಪ ಸಂಭವಿಸಿದ ಸ್ಛೋಟಕ್ಕೆ ಯೋಜನೆ ರೂಪಿಸುವ ಜೊತೆಗೆ ಆರ್ಥಿಕ ನೆರವು ನೀಡಿದ್ದರು ಎಂದು ಎನ್‌ಐಎ ತಿಳಿಸಿದೆ. ಸ್ಛೋಟಕ್ಕೆ ಬಳಕೆಯಾದ ಕಾರು ಜಸೀರ್ ಬಿಲಾಲ್ ವಾನಿ ಹೆಸರಿನಲ್ಲಿ ನೋಂದಣಿಯಾಗಿತ್ತು. ಬಾಂಬ್ ತಯಾರಿಕೆಗೆ ತಾಂತ್ರಿಕ ನೆರವು ನೀಡಿದ ಆರೋಪದ ಅಡಿಯಲ್ಲಿ ಅಮೀರ್ ರಷೀದ್ ಅಲಿಯನ್ನು ಎನ್‌ಐಎ ಈ ಹಿಂದೆಯೇ ಬಂಧಿಸಿತ್ತು.





