ಡೆಹ್ರಾಡೂನ್: ಕೋಲ್ಕತ್ತಾ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಕಾವಿನ ನಡುವೆಯೇ ಮತ್ತೊಂದು ಅತ್ಯಾಚಾರ ಪ್ರಕರಣ ವರದಿಯಾಗಿದೆ.
ಡೆಹ್ರಾಡೂನ್‍ನ ಅಂತಾರಾಜ್ಯ ಬಸ್ ನಲ್ಲಿ ಹೊರಟಿದ್ದ ಅಪ್ರಾಪ್ತ ಬಾಲಕಿ ಮೇಲೆ ಐವರು ನೀಚರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಆ.13ರಂದು ನಡೆದಿದೆ. ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ನಡುರಾತ್ರಿ ಯುವತಿಯೊಬ್ಬಳು ಬಸ್‍ಸ್ಟ್ಯಾಂಡ್‍ನಲ್ಲಿ ಕುಳಿತಿರುವ ಬಗ್ಗೆ ಡೆಹ್ರಾಡೂನ್ ಮಕ್ಕಳ ಕಲ್ಯಾಣ ಸಮಿತಿಗೆ ಕರೆಯೊಂದು ಬಂದಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿ ಯುವತಿಯನ್ನು ಸರ್ಕಾರಿ ಹೋಂಗೆ ಕಳುಹಿಸಿ ವಿಚಾರಣೆ ನಡೆಸಿದಾಗ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಬಗ್ಗೆ ಹೇಳಿಕೊಂಡಿದ್ದಾಳೆ.
ಬಸ್ ಸಿಬ್ಬಂದಿ ಅಪ್ರಾಪ್ತ ಬಾಲಕಿಯನ್ನು ದೆಹಲಿಯಿಂದ ಡೆಹ್ರಾಡೂನ್‌ಗೆ ಕರೆತಂದಿದ್ದರು. ಇಬ್ಬರು ಬಸ್ ಚಾಲಕರು, ಕಂಡಕ್ಟರ್, ಕ್ಯಾಶಿಯರ್ ಹಾಗೂ ಇತರ ಇಬ್ಬರು ಚಾಲಕರು ಸೇರಿ ಅದೇ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಡೆಹ್ರಾಡೂನ್ ಎಸ್‌ಎಸ್‌ಪಿ ಅಜಯ್‌ಸಿಂಗ್ ತಿಳಿಸಿದ್ದಾರೆ.
ಎಲ್ಲಾ ಐವರು ಆರೋಪಿಗಳಾದ ಧರ್ಮೇಂದ್ರ ಕುಮಾರ್(32), ರಾಜ್‍ಪಾಲ್(57), ದೇವೇಂದ್ರ (52), ರಾಜೇಶ್ ಕುಮಾರ್ ಸೋನಕ್(38), ಹಾಗೂ ರವಿಕುಮಾರ್(34)ನನ್ನು ಪೋಲಿಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕೃತ್ಯ ನಡೆಸಿರುವುದನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಘಟನೆ ಹಿನ್ನೆಲೆ:
ಯುವತಿ ಪಂಜಾಬ್‍ಗೆ ಹೇಗೆ ಹೋಗಬೇಕೆಂದು ಬಸ್ ಚಾಲಕ ದೇವೇಂದ್ರನ ಬಳಿಕ ಕೇಳಿದ್ದಳು. ಈ ವೇಳೆ ಡೆಹ್ರಾಡೂನ್‍ಗೆ ಬಂದು ಅಲ್ಲಿಂದ ಬಸ್‍ನಲ್ಲಿ ಹೋಗಬಹುದೆಂದು ಯುವತಿಗೆ ಚಾಲಕ ಹೇಳಿದ್ದಾನೆ. ಡೆಹ್ರಾಡೂನ್ ತಲುಪುವ ಮೊದಲೇ ಎಲ್ಲಾ ಬಸ್ ಪ್ರಯಾಣಿಕರು ಇಳಿದ ಕಾರಣ ಬಸ್ ಖಾಲಿಯಾಗಿತ್ತು. ಯುವತಿ ಒಬ್ಬಳೇ ಇದ್ದಳು. ಟರ್ಮಿನಲ್ ತಲುಪುತ್ತಿದ್ದಂತೆ ದೇವೇಂದ್ರ ಮತ್ತು ಧರ್ಮೇಂದ್ರ ಬಸ್‍ನ್ನು ಪಾರ್ಕ್ ಮಾಡಿ ಆಕೆ ಮೇಲೆ ಅತ್ಯಾಚಾರ ಎಸಗಿ ಕ್ರೌರ್ಯ ಮೆರೆದಿದ್ದಾರೆ.
ಇದಾದ ಬಳಿಕ ರವಿ ಮತ್ತು ರಾಜ್‍ಪಾಲ್ ಕೂಡ ಆಕೆಯನ್ನು ಅತ್ಯಾಚಾರ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಕ್ಯಾಶಿಯರ್ ಕೂಡ ನೀಚರ ಜೊತೆ ಸೇರಿ ಅತ್ಯಾಚಾರ ಮಾಡಿ ಅಟ್ಟಹಾಸ ಮೆರೆದಿದ್ದಾನೆ.





