ಚೆನ್ನೈ: ಬಂಗಾಳ ಕೊಲ್ಲಿಯ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತದಿಂದ ʼಫೆಂಗಲ್ʼ ಚಂಡಮಾರುತ ಉಗಮವಾಗಿದ್ದು, ಶುಕ್ರವಾರದಿಂದಲೇ ಕರಾವಳಿ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದೆ.
ಫೆಂಗಲ್ ಚಂಡಮಾರುತದಿಂದ ಉತ್ತರ ತಮಿಳುನಾಡಿನ ಹಲವು ಪ್ರದೇಶಗಳು ಮಳೆ ನೀರಿನಿಂದ ಜಲಾವೃತಗೊಂಡಿದೆ. ವಿಪತ್ತು ನಿರ್ವಹಣೆಗಾಗಿ ಪೊಲೀಸರು, ಅಗ್ನಿಶಾಮಕ ಹಾಗೂ ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ತಮಿಳನಾಡಿನಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಚೆನ್ನೈನ ಹನ್ನೆರಡು(12) ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಮೆಟ್ರೊರೈಲು ಕಾರ್ಯನಿರ್ವಹಿಸುತ್ತಿದೆ.
ಚೆನ್ನೈನ ಎನ್ನೋರ್ ಪ್ರದೇಶದಲ್ಲಿ ಕಳೆದ 6 ಗಂಟೆಗಳಿಂದ 8ಸೆಂ.ಮೀ ಮಳೆಯಾಗಿದೆ. ಅಣ್ಣಾನಗರದಲ್ಲಿ 10 ಸೆಂ. ಮೀ ಮಳೆ ದಾಖಾಲಾಗಿದೆ ಎಂದು ಭಾರತೀಯ ಹವಮಾನ ಇಲಾಖೆ (IMD) ತಿಳಿಸಿದೆ.
ಫೆಂಗಲ್ ಚಂಡಮಾರುತವು ಶನಿವಾರ ಪುದುಚೇರಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಮಧ್ಯಾಹ್ನ ಕಾರೈಕಲ್ ಮತ್ತು ಮಾಮಲ್ಲಪುರಂನಲ್ಲಿ ಭೂಕುಸಿತವಾಗುವ ಸಂಭವವಿದೆ ಎಂದು ಭಾರತೀಯ ಹವಮಾನ ಇಲಾಖೆ (IMD) ಎಚ್ಚರಿಸಿದೆ.
ಸಮುದ್ರದ ವಾತಾವರಣ ಪ್ರಕ್ಷುಬ್ದವಾಗಿದ್ದು, ಮೀನುಗಾರರು ಸಮುದ್ರಗಳಿಗೆ ಇಳಿಯದಂತೆ ಎಚ್ಚರಿಸಿದ್ದಾರೆ. ಹಾಗೆಯೇ ಮರೀನಾ ಬೀಚ್ ಸೇರಿದಂತೆ ಪ್ರಮುಖ ಬೀಚ್‌ಗಳಿಗೆ ಪ್ರವಾಸಿಗರು ಹೋಗದಂತೆ ನಿರ್ಭಂದಿಸಲಾಗಿದೆ.
ತಮಿಳುನಾಡು ಸರ್ಕಾರ ಶಾಲಾ ಕಾಲೇಜುಗಳಿಗೆ ಒಂದು ದಿನ (ನ.30) ರಜೆ ಘೋಷಿಸಿದೆ. ಅಲ್ಲದೇ ಉದ್ಯೋಗಿಗಳು ಮನೆಯಲ್ಲೇ ತಮ್ಮ ಕೆಲಸ ನಿರ್ವಹಿಸುವಂತೆ ಐಟಿ ಸಂಸ್ಥೆಗಳಿಗೆ ಸರ್ಕಾರದ ಕಡೆಯಿಂದ ಮನವಿ ಮಾಡಲಾಗಿದೆ.





