ಭುವನೇಶ್ವರ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಪರಿಣಾಮ ಡಾನಾ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ವಾಯುಭಾರ ಕುಸಿತವಾಗಿರುವ ಪರಿಣಾಮ ಪಶ್ಚಿಮ ಮತ್ತು ವಾಯುವ್ಯ ದಿಕ್ಕಿನೆಡೆಗೆ ಚಲಿಸಲಿದ್ದು, ನಾಳೆಯೊಳಗೆ ಅದು ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್.24ರ ವೇಳೆಗೆ ಇದು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ.
ಗುರುವಾರ ರಾತ್ರಿ ವೇಳೆಗೆ ಒಡಿಶಾದ ಪುರಿಗೆ ಅಪ್ಪಳಿಸಲಿದ್ದು, ಈ ವೇಳೆ ಗಾಳಿಯ ವೇಗ ಗಂಟೆಗೆ 100 ರಿಂದ 120 ಕಿ.ಮೀವರೆಗೆ ಇರಲಿದೆ ಎನ್ನಲಾಗಿದೆ.
ಡಾನಾ ಚಂಡಮಾರುತದ ಪರಿಣಾಮ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದ್ದು, ಒಡಿಶಾದ ಹಾಗೂ ಪಶ್ಚಿಮ ಬಂಗಾಳದಲ್ಲಿ ತುರ್ತು ಪರಿಸ್ಥಿತಿ ನಿಯಂತ್ರಿಸಲು 14 ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ.
ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಗುರುವಾರ ಹಾಗೂ ಶುಕ್ರವಾರ ಧಾರಾಕಾರ ಮಳೆಯಾಗಲಿದ್ದು, ಜನತೆ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.





