ನವದೆಹಲಿ: ಮೂರು ವರ್ಷಗಳ ಹಿಂದೆ ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳನ್ನು ಬೆಚ್ಚಿ ಬೀಳಿಸಿದ್ದ ಮಹಾಮಾರಿ ಕೋವಿಡ್-19 ಮತ್ತೊಮ್ಮೆ ತಲೆ ಎತ್ತಿದೆ.
ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಎರಡು ಕೋವಿಡ್ ಸಂಬಂಧಿತ ಸಾವಿನ ಪ್ರಕರಣಗಳು ವರದಿಯಾಗಿವೆ. ಕೊರೋನಾದಿಂದಾಗಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮುಂಬೈನಲ್ಲಿ ಕೊರೋನಾ ಸಂಬಂಧಿಸಿದಂತೆ ಎಚ್ಚರಿಕೆಯನ್ನು ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ಈಗಾಗಲೇ ಆರೋಗ್ಯ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ.
ಕೋವಿಡ್ -19 ಅಲೆಯು ಏಷ್ಯಾದ ದೇಶಗಳಾದ ಚೀನಾ, ಸಿಂಗಾಪುರ, ಹಾಂಗ್ ಕಾಂಗ್ ಮತ್ತು ಥೈಲ್ಯಾಂಡ್ಗೆ ಅಪ್ಪಳಿಸಿದೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದು ವಿಶ್ವಾದ್ಯಂತ ಆತಂಕವನ್ನು ಹೆಚ್ಚಿಸಿದೆ.
ಈಗಾಗಲೇ ಏಷ್ಯಾದ ದೇಶಗಳಾದ ಸಿಂಗಾಪುರ, ಹಾಂಗ್ ಕಾಂಗ್ ಮತ್ತು ಥೈಲ್ಯಾಂಡ್ನಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಈ ಮಧ್ಯೆ, ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಇಬ್ಬರು ಕೋವಿಡ್-ಪಾಸಿಟಿವ್ ರೋಗಿಗಳು ಸಾವನ್ನಪ್ಪಿದ್ದಾರೆ.
ಕೋವಿಡ್ -19 ರೋಗಿಗಳಲ್ಲಿ ಈ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದರೆ ವೇಗವಾಗಿ ಬೆಳೆಯುತ್ತಿರುವ ಓಮಿಕ್ರಾನ್ ಹೊಸ ರೂಪಾಂತರ. ಜೆಎನ್ .1 ಮತ್ತು ಎಲ್ ಎಪ್ 7 ರೂಪಾಂತರಗಳಿವೆ ಎಂದು ವರದಿಯಾಗಿದೆ. ಸಿಂಗಾಪುರದಲ್ಲಿ, ಈ ಸೋಂಕಿನಿಂದ ಸೋಂಕಿತ ರೋಗಿಗಳ ಸಂಖ್ಯೆ 2025ರ ಮೇ ಆರಂಭದ ವೇಳೆಗೆ 14,000ಕ್ಕಿಂತ ಹೆಚ್ಚಾಗಿದೆ. ಏಪ್ರಿಲ್ ಕೊನೆಯ ವಾರದಲ್ಲಿ, ಈ ಸಂಖ್ಯೆ 11,100 ಆಗಿತ್ತು.
ಇನ್ನೂ ಭಾರತದಲ್ಲೂ 257 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಪತ್ತೆಯಾಗಿರುವ ಬಹುತೇಕ ಪ್ರಕರಣಗಳು ಸೌಮ್ಯವಾಗಿದ್ದು, ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ. ಭಾರತದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸರ್ಕಾರ ಹೇಳಿದೆ.
ಕೇಂದ್ರ ಆರೋಗ್ಯ ಸಚಿವಾಲಯವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಸೂಕ್ತ ಕ್ರಮಗಳನ್ನು ಜಾರಿಗೆ ತರಲು ಮತ್ತು ಮೇಲ್ವಿಚಾರಣೆ ಮಾಡಲು ಸಜ್ಜಾಗಿದೆ ಎಂದು ತಿಳಿಸಿದೆ. ಸದ್ಯ ನಾಗರಿಕರು ಹೆಚ್ಚಿನ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಏಷ್ಯಾದ ಹಲವು ಭಾಗಗಳಲ್ಲಿ ಹೆಚ್ಚಿನ ಸೋಂಕು ಏಷ್ಯಾದ ಕೆಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವು ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಏರಿಕೆಯ ಹೊರತಾಗಿಯೂ, ದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಭಾರತದ ಅಧಿಕಾರಿಗಳು ಖಚಿತಪಡಿಸಿದ್ದಾರೆ.





