ಟೆಹರಾನ್: ಕಳೆದ ಕೆಲ ದಿನಗಳಿಂದ ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೇರಿಕಾ ಜಂಟಿ ದಾಳಿ ನಡೆಸುತ್ತಿರುವ ಪರಿಣಾಮ ಅಕ್ಷರಶಃ ಇರಾನ್ ನಲುಗಿ ಹೋಗಿದೆ.
ಆದರೂ ಕಂಗೆಡದ ಇರಾನ್ ದೇಶ ಇಸ್ರೇಲ್ ಹಾಗೂ ಅಮೇರಿಕಾದ ಹಲವು ಪ್ರದೇಶಗಳ ಮೇಲೆ ಪ್ರತಿಯಾಗಿ ದಾಳಿ ನಡೆಸುತ್ತಿದ್ದು, ನಾವು ಯಾರಿಗೂ ಬಗ್ಗಲ್ಲ ಎಂಬ ಸಂದೇಶ ರವಾನೆ ಮಾಡುತ್ತಿದೆ.
ಈ ಮಧ್ಯೆ ಇರಾನ್ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದ್ದು, ತೈಲ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಜೊತೆಗೆ ಹಾರ್ಮುಜ್ ಜಲಸಂಧಿಯ ಸಮುದ್ರದಡಿ ಜಗತ್ತಿನ ಬಹುತೇಕ ಇಂಟರ್ನೆಟ್ ಸಂಚಾರವನ್ನು ಸಾಗಿಸುವ ದೊಡ್ಡ ಪ್ರಮಾಣದ ಸಬ್‌ಮರಿನ್ ಫೈಬರ್-ಆಪ್ಟಿಕ್ ಕೇಬಲ್‌ಗಳ ಜಾಲವಿದೆ. ಈ ಕೇಬಲ್‌ಗಳು ಏಷ್ಯಾ, ಯುರೋಪ್ ಮತ್ತು ಪಶ್ಚಿಮ ಏಷ್ಯಾವನ್ನು ಸಂಪರ್ಕಿಸುತ್ತವೆ ಮತ್ತು ಹಣಕಾಸು ವ್ಯವಹಾರಗಳು, ವಿಡಿಯೋ ಕರೆಗಳು ಹಾಗೂ ಕ್ಲೌಡ್ ಕಂಪ್ಯೂಟಿಂಗ್ ಸೇರಿದಂತೆ ಅನೇಕ ಡಿಜಿಟಲ್ ಸೇವೆಗಳನ್ನು ಸಾಗಿಸುತ್ತವೆ.
ಭಾರತದ ಅಂತರರಾಷ್ಟ್ರೀಯ ಡೇಟಾ ಸಂಚಾರದ ದೊಡ್ಡ ಭಾಗ ಈ ಮಾರ್ಗದ ಸಮೀಪದಿಂದಲೇ ಸಾಗುತ್ತದೆ. ಈ ಪ್ರದೇಶದಲ್ಲಿ ಉದ್ವಿಗ್ನತೆ ಅಥವಾ ಸೈನಿಕ ಚಟುವಟಿಕೆಗಳಿಂದ ಅಡಚಣೆ ಉಂಟಾದರೆ ಹಲವಾರು ಕೇಬಲ್ ವ್ಯವಸ್ಥೆಗಳು ಹಾನಿಗೊಳಗಾಗುವ ಅಥವಾ ಅವುಗಳ ದುರಸ್ತಿ ವಿಳಂಬವಾಗುವ ಸಾಧ್ಯತೆ ಎದ್ದು ಕಾಣುತ್ತಿದೆ. ಇಂಟರ್ನೆಟ್ ಸಂಪೂರ್ಣವಾಗಿ ಸ್ಥಗಿತಗೊಳ್ಳುವುದಿಲ್ಲ. ಆದರೆ ಸಂಚಾರ ದಟ್ಟಣೆ ಹೆಚ್ಚಾಗಿ ಅಂತರರಾಷ್ಟ್ರೀಯ ಸೇವೆಗಳ ವೇಗ ಕಡಿಮೆಯಾಗಬಹುದು.
ಜಾಗತಿಕ ಡಿಜಿಟಲ್ ಆರ್ಥಿಕತೆ ವೇಗವಾಗಿ ವಿಸ್ತರಿಸುತ್ತಿರುವ ಈ ಕಾಲದಲ್ಲಿ, ಸಮುದ್ರದಡಿ ಇರುವ ಈ ಡೇಟಾ ಮಾರ್ಗಗಳನ್ನು ರಕ್ಷಿಸುವುದು ಎನರ್ಜಿ ಸರಬರಾಜು ಮಾರ್ಗಗಳನ್ನು ರಕ್ಷಿಸುವಷ್ಟು ಮಹತ್ವ ಪಡೆದಿದೆ.
ಒಂದು ವೇಳೆ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಿದರೆ ಇದರ ಪರಿಣಾಮವನ್ನು ಇತರ ದೇಶಗಳು ಅನುಭವಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.





