ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹೊಸ ಪಿಂಚಣಿ ಯೋಜನೆ ಏಕೀಕೃತ ಪಿಂಚಣಿ ಯೋಜನೆಗೆ ಅನುಮೋದನೆ ನೀಡಿದೆ.
ಈ ಮೂಲಕ ಇನ್ನು ಮುಂದೆ ಸರ್ಕಾರಿ ನೌಕರರು ಯುಪಿಎಸ್ ಪಿಂಚಣಿ ಯೋಜನೆಯ ಲಾಭವನ್ನು ಪಡೆಯುತ್ತಾರೆ.
ಮೋದಿ ಸರ್ಕಾರ ನೌಕರರಿಗೆ ಹೊಸ ಪಿಂಚಣಿ ನೀತಿಯನ್ನು ಪ್ರಕಟಿಸಿದ್ದು, ಹೊಸ ಪಿಂಚಣಿ ನೀತಿಯ ಹೆಸರು ಏಕೀಕೃತ ಪಿಂಚಣಿ ಯೋಜನೆಯಾಗಿದೆ.
ಇದರ ಅಡಿಯಲ್ಲಿ ಒಬ್ಬ ಉದ್ಯೋಗಿಯು ಕನಿಷ್ಠ 25 ವರ್ಷಗಳ ಕಾಲ ಕೆಲಸ ಮಾಡಿದ್ದರೆ, ನಿವೃತ್ತಿಯ ಹಿಂದಿನ 12 ತಿಂಗಳುಗಳ ಸರಾಸರಿ ವೇತನದ ಕನಿಷ್ಠ 50 ಪ್ರತಿಶತವನ್ನು ಪಿಂಚಣಿಯಾಗಿ ಪಡೆಯುತ್ತಾನೆ.
ಈ ಬಗ್ಗೆ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು, ಇಂದು ಕೇಂದ್ರ ಸಚಿವ ಸಂಪುಟವು ಸರ್ಕಾರಿ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆಗೆ ಅನುಮೋದನೆ ನೀಡಿದೆ. ಶೇಕಡಾ 50 ರಷ್ಟು ಖಚಿತವಾದ ಪಿಂಚಣಿ ಯೋಜನೆಯೆ ಮೊದಲ ಆಧಾರವಾಗಿದೆ. ಎರಡನೇ ಆಧಾರವು ಖಚಿತವಾದ ಕುಟುಂಬ ಪಿಂಚಣಿಯಾಗಿದೆ. ಸರಿಸುಮಾರು 23 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಪಿಂಚಣಿ ಲಭ್ಯವಿರುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.