ಹೊಸದಿಲ್ಲಿ : ಹಾರ್ಮುಜ್ ಜಲಸಂಧಿ ಸಂಘರ್ಷದಿಂದ ಉಂಟಾದ ಅಡುಗೆ ಅನಿಲ (ಎಲ್‌ಪಿಜಿ) ಸರಬರಾಜು ಕೊರತೆಯ ನಡುವೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಎಲ್ಲಾ ಎಲ್‌ಪಿಜಿ ಗ್ರಾಹಕರಿಗೆ ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು (ಇ-ಕೆವೈಸಿ) ಕಡ್ಡಾಯಗೊಳಿಸಿದೆ.
ಎಲ್ಲಾ ಎಲ್‌ಪಿಜಿ ಗ್ರಾಹಕರು ಬಯೋಮೆಟ್ರಿಕ್ ಆಧಾರ್ ಆಥೆಂಟಿಕೇಶನ್ (ಇ-ಕೆವೈಸಿ) ಪೂರ್ಣಗೊಳಿಸಬೇಕು. ಇದನ್ನು ಮನೆಯಲ್ಲೇ ತೈಲ ಮಾರುಕಟ್ಟೆ ಕಂಪನಿಗಳ ಮೊಬೈಲ್ ಅಪ್ಲಿಕೇಶನ್ ಮತ್ತು ಆಧಾರ್ ಫೇಸ್‌ಆರ್‌ಡಿ ಅಪ್ ಬಳಸಿ ಮಾಡಬಹುದು ಎಂದು ಸಚಿವಾಲಯವು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ (ಪಿಎಂಯುವೈ) ಸಬ್ಸಿಡಿ ಪಡೆಯುವ 10.51 ಕೋಟಿ ಗ್ರಾಹಕರಿಗೆ ವಾರ್ಷಿಕ ಬಯೋಮೆಟ್ರಿಕ್ ಇ-ಕೆವೈಸಿ ಈಗಾಗಲೇ ಕಡ್ಡಾಯವಾಗಲಿದೆ. ಇದು ಸಬ್ಸಿಡಿ ದುರುಪಯೋಗ ತಡೆಯುವುದು, ಸರಿಯಾದ ವಿತರಣೆ ಖಚಿತಪಡಿಸುವುದು ಮತ್ತು ಎಲ್‌ಪಿಜಿ ಸಿಲಿಂಡರ್ ಕಳ್ಳಸಾಗಾಣಿಕೆ ತಡೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದೆ.
ಹಾಗೇಯೆ, ಎಲ್‌ಪಿಜಿ ವಿತರಕರನ್ನು ಸಂಪರ್ಕಿಸುವಂತೆ ಸಲಹೆ ನೀಡಿರುವ ಸಚಿವಾಲಯ, ಹೆಚ್ಚಿನ ಮಾಹಿತಿಗಾಗಿ 1800-2333-555 ಸಹಾಯವಾಣಿಯನ್ನು ಸಂಪರ್ಕಿಸುವಂತೆ ತಿಳಿಸಿದೆ.





