ನವದೆಹಲಿ: ದೇಶದಲ್ಲಿ ಇನ್ನೂ 1 ವರ್ಷದೊಳಗೆ ಮಧ್ಯಂತರ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಭವಿಷ್ಯ ನುಡಿದಿದ್ದಾರೆ.
ಈ ಬಗ್ಗೆ ಶುಕ್ರವಾರ(ಜೂ.7) ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು 6 ತಿಂಗಳಿಂದ 1 ವರ್ಷದ ನಡುವೆ ಭಾರತದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಿದ್ಧರಾಗಿರಿ ಎಂದು ಮನವಿ ಮಾಡಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರ ಉಪಮುಖ್ಯಂತ್ರಿ ದೇವೇಂದ್ರ ಫಡ್ನವೀಸ್, ರಾಜಸ್ಥಾನದ ಕೌಂಟರ್ ಭಜನ ಲಾಲ್ ಶರ್ಮ ಅವರ ವಿರುದ್ಧ ತಮ್ಮ ಭಾಷಣದುದ್ದಕ್ಕೂ ವಾಗ್ದಾಳಿ ನಡೆಸಿದ ಭೂಪೇಶ್ ಬಘೇಲ್ ಯೋಗಿ ಆದಿತ್ಯನಾಥ್ ಸೇರಿದಂತೆ ಇನ್ನೂ ಅನೇಕ ಬಿಜೆಪಿ ನಾಯಕರ ಕುರ್ಚಿ ಅಲುಗಾಡುತ್ತಿದೆ. ಇವರೆಲ್ಲರೂ ರಾಜೀನಾಮೆ ನೀಡುತ್ತಾರೆ ಎಂದು ಹೇಳಿದರು.
ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಮತದಾರರು ಬಿಜೆಪಿ ಹಾಗೂ ಮೋದಿಗೆ ತಕ್ಕ ಪಾಠ ಕಲಿಸಿದ್ದಾರೆ. ದಿನಕ್ಕೆ 3 ಬಾರಿ ಬಟ್ಟೆ ಬದಲಿಸುತ್ತಿದ್ದ ಮೋದಿ ಈಗ ಒಂದೇ ಉಡುಪಿನಲ್ಲಿ 3 ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದಾರೆ. ಮೋದಿ ಇನ್ಮೂಂದೆ ತಿನ್ನುವುದು, ಬಟ್ಟೆ ಧರಿಸುವ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಲೇವಡಿ ಮಾಡಿದರು.
ವಿಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸುವ ಹಾಗೂ ಚುನಾಯಿತರನ್ನು ಬೆದರಿಸುವವರಿಗೆ ಜನರು ಪಾಠ ಕಲಿಸಿದ್ದಾರೆ ಎಂದರು.