ಬಲೂಚಿಸ್ತಾನ್: ಪಾಕಿಸ್ತಾನ ನೈರುತ್ಯ ಭಾಗದಲ್ಲಿಂದು ಶಾಲಾ ಬಸ್ ಮೇಲೆ ಆತ್ಮಾಹುತಿ ಕಾರ್ ಬಾಂಬರ್ ದಾಳಿ ನಡೆದಿದ್ದು, ಕನಿಷ್ಠ ಆರು ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬುಲೂಚಿಸ್ತಾನದ ಪ್ರಾಂತ್ಯದ ಖುಜ್ವಾರ್ ಜಿಲ್ಲೆಯ ಬಸ್ ನಗರದಲ್ಲಿ ಶಾಲೆಗೆ ಮಕ್ಕಳನ್ನು ಸಾಗಿಸುತ್ತಿದ್ದಾಗ ಈ ದಾಳಿ ನಡೆದಿದೆ.
ಜನಾಂಗೀಯ ಬಲೂಚ್ ಈ ದಾಳಿ ನಡೆಸಿರುವ ಸಾಧ್ಯತೆ ಇದ್ದು, ಈ ದಾಳಿಯನ್ನು ಪಾಕ್ ಬಲವಾಗಿ ಖಂಡಿಸಿದೆ.
ಇನ್ನು ಬಲೂಚಿಸ್ತಾನದಲ್ಲಿ ಭಾರತದಿಂದಲೇ ಬಾಂಬ್ ದಾಳಿಯಾಗಿದೆ ಎಂದು ಪಾಕ್ ಆರೋಪ ಮಾಡಿದ್ದು, ಪಾಕ್ ಆರೋಪಕ್ಕೆ ಭಾರತ ತಿರುಗೇಟು ನೀಡಿದೆ.
ಈ ಬಗ್ಗೆ ಮಾತನಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಖುಜ್ವಾರ್ ಘಟನೆಯಲ್ಲಿ ಭಾರತದ ಕೈವಾಡವಿದೆ ಎಂಬ ಪಾಕಿಸ್ತಾನದ ಆಧಾರ ರಹಿತ ಆರೋಪಗಳನ್ನು ಭಾರತ ತಿರಸ್ಕರಿಸುತ್ತದೆ. ಅಂತಹ ದುರಂತ ಘಟನೆಯಲ್ಲಿ ಆದ ಜೀವಹಾನಿಗೆ ಭಾರತ ಸಂತಾಪ ವ್ಯಕ್ತಪಡಿಸುತ್ತದೆ ಎಂದು ಹೇಳಿದ್ದಾರೆ.





