ನವದೆಹಲಿ: ವಿರೋಧ ಪಕ್ಷದ ನಾಯಕನಾಗಿ ಮೊದಲ ಬಾರಿಗೆ ಆಯ್ಕೆಯಾದ ರಾಹುಲ್ ಗಾಂಧಿ ಅವರು ತಮ್ಮ ಮೊದಲ ಭಾಷಣವನ್ನು ನವದೆಹಲಿಯ ಸಂಸತ್‌ನಲ್ಲಿಂದು (ಜುಲೈ. 1) ಮಾಡಿದರು.
ಹಿಂದು ಎಂದು ಹೇಳಿಕೊಂಡು ತಿರುಗಾಡುವವರು ದಿನದ 24 ಗಂಟೆಯೂ ಕೇವಲ ಹಿಂಸೆ, ಹಿಂಸೆ ಹಿಂಸೆ ಮಾಡುವುದರಲ್ಲಿಯೇ ತೊಡಗಿಸಿಕೊಂಡಿದ್ದಾರೆ. ದೇಶದಲ್ಲಿ ಹಿಂದೂ ಧರ್ಮ, ಮುಸ್ಲಿಂ, ಸಿಖ್ ಧರ್ಮ ಸೇರಿದಂತೆ ಎಲ್ಲಾ ಧರ್ಮಗಳು ಧೈರ್ಯ ಮತ್ತು ನಿರ್ಭೀತರಾಗಿರುವುದರ ಬಗ್ಗೆ ಹೇಳುತ್ತವೆ. ಆದರೆ ಹಿಂದೂ ಎಂದು ಹೇಳಿಕೊಂಡು ತಿರುಗಾಡುವವರು ಹಿಂಸಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಮ್ಮ ಮೊದಲ ಭಾಷಣದಲ್ಲಿಯೇ ರಾಹುಲ್ ಗಾಂಧಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಕ್ಲಾಸ್ ತೆಗೆದುಕೊಂಡರು.
ಲೋಕಸಭೆಯಲ್ಲಿ ಹಿಂದೂ ದೇವರಾದ ಶಿವನ ಫೋಟೋ ಹಿಡಿದು, ಶಿವನ ಸಂದೇಶವು ನಿರ್ಭಯತೆ ಮತ್ತು ಅಹಿಂಸೆಯನ್ನು ಸೂಚಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.
ಇದರ ಜೊತೆಗೆ ಇಸ್ಲಾಂ, ಕ್ರಿಶ್ಚಿಯನ್, ಬೌದ್ಧ, ಜೈನ, ಸಿಖ್ ಸೇರಿದಂತೆ ಎಲ್ಲಾ ಧರ್ಮಗಳು ಧೈರ್ಯದ ಬಗ್ಗೆ ಮಾತನಾಡುತ್ತವೆ ಹಾಗೂ ನಿರ್ಭಯತೆಯ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತದೆ ಎಂದು ಪ್ರಸ್ತಾಪಿಸಿದರು.
ನನ್ನ ಮೇಲೆ ಆರೋಪ ಮಾಡುತ್ತಿದ್ದ ಬಿಜೆಪಿಯವರೆಲ್ಲಾ ಈಗ ಸಂವಿಧಾನಕ್ಕೆ ಜೈಕಾರ ಹಾಕುತ್ತಿದ್ದಾರೆ ಇದು ನನಗೆ ಬಹಳ ಸಂತೋಷವಾಗಿದೆ. ವಿರೋಧ ಪಕ್ಷದ ನಾಯಕನಾಗಿರುವುದಕ್ಕೆ ನನಗೆ ಬಹಳ ಹೆಮ್ಮೆಯಿದೆ. ಆದರೆ ನನಗೆ ಅಧಿಕಾರಕ್ಕಿಂತ ಜನರ ಒಳಿತೆ ಮುಖ್ಯ ಎಂದು ಸ್ಪಷ್ಟಪಡಿಸಿದರು.
ಇನ್ನು ರಾಹುಲ್ ಗಾಂಧಿ ಅವರು ಹಿಂದೂ ಹೆಸರೇಳಿಕೊಂಡು ಹಿಂಸೆ ಮಾಡುತ್ತಾರೆ ಎಂದು ಹೇಳಿದ ಹೇಳಿಕೆ ಉಲ್ಲೇಖಿಸಿದ ಪ್ರಧಾನಿ ಮೋದಿ, ಹಿಂದೂ ಸಮುದಾಯವನ್ನು ಹಿಂಸಾಚಾರಿಗಳು ಎಂದು ಕರೆದಿರುವುದು ಸಹಿಸಲಾಗದ ವಿಷಯವಾಗಿದೆ ಎಂದು ಧನಿ ಎತ್ತಿದರು.
ಇದಕ್ಕೆ ಸ್ಥಳದಲ್ಲೇ ಇದ್ದ ರಾಹುಲ್ ಗಾಂಧಿ, ಹಿಂಸಾಚಾರಿಗಳು ಎಂದು ಕರೆದಿರುವುದು ಪ್ರಧಾನಿ ಮೋದಿ ಅವರನ್ನು, ಆರ್‌ಎಸ್‌ಎಸ್ ಅನ್ನು, ನರೇಂದ್ರ ಮೋದಿ ಎಂದರೇ ಇಡೀ ಹಿಂದೂ ಸಮಾಜವಲ್ಲ, ಆರ್‌ಎಸ್‌ಎಸ್ ಎಂದರೇ ಇಡೀ ಹಿಂದೂ ಸಮಾಜವಲ್ಲ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಹಿಂದೂ ಸಮುದಾಯದ ಪ್ರತಿನಿಧಿಯಲ್ಲ ಎಂದು ತಿರುಗೇಟು ನೀಡಿದರು.
ರಾಗಾ ತೀಕ್ಷ್ಣ ಬಾಣಗಳಿಗೆ ಉತ್ತರ ನೀಡಲಾಗದೇ ಪ್ರಧಾನಿ ಮೋದಿ ಮೌನವಾಗಿ ಕುಳಿತರು.
ರಾಗಾ ಕ್ಷಮೆಯಾಚಿಸಬೇಕು: ರಾಹುಲ್ ಮಾತಿಗೆ ಕಿಡಿಕಾರಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, ಈ ದೇಶದ ಕೋಟ್ಯಂತರ ಜನರು ತಮ್ಮನ್ನು ತಾವು ಹಿಂದೂ ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಾರೆ, ಅವರೆಲ್ಲರೂ ಹಿಂಸೆ ಮಾಡುತ್ತಾರೆಯೇ? ಹಿಂಸೆಯ ಮನೋಭಾವವನ್ನು ಯಾವುದೇ ಧರ್ಮದೊಂದಿಗೆ ಜೋಡಿಸುವುದು ತಪ್ಪು. ಇದಕ್ಕಾಗಿ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.




