Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಲೋಕಸಭೆಯಲ್ಲಿ ಬಿಜೆಪಿ 150 ಸ್ಥಾನ ಕೂಡ ದಾಟಲ್ಲ: ರಾಹುಲ್‌ ಗಾಂಧಿ

ಘಾಜಿಯಾಬಾದ್‌, ಉತ್ತರಪ್ರದೇಶ: 2024ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 150 ಸ್ಥಾನ ಕೂಡ ಗೆಲ್ಲುವುದಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಮುನ್ನ ಇಂಡಿಯಾ ಒಕ್ಕೂಟದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಸಂದರ್ಶನ ಸ್ಕ್ರಿಪ್ಟೆಡ್ ಮತ್ತು ಫ್ಲಾಪ್ ಶೋ ಆಗಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ, ಎಎನ್‌ಐಗೆ ಸಂದರ್ಶನ ನೀಡಿದ್ದ ಮೋದಿ ಕಾರ್ಯಕ್ರಮ ಸ್ಕ್ರಿಪ್ಟ್ ಆಗಿತ್ತು, ಆದರೆ ಅದು ಫ್ಲಾಪ್ ಶೋ ಆಗಿದೆ. ಅದರಲ್ಲಿ ಚುನಾವಣಾ ಬಾಂಡ್‌ಗಳನ್ನು ವಿವರಿಸಲು ಮೋದಿ ಪ್ರಯತ್ನಿಸಿ, ಚುನಾವಣಾ ಬಾಂಡ್‌ಗಳ ವ್ಯವಸ್ಥೆಯು ಪಾರದರ್ಶಕತೆಗಾಗಿ, ಸ್ವಚ್ಛ ರಾಜಕಾರಣಕ್ಕೆ ಕಾರಣವಾಗಿದೆ ಎಂದು ಮೋದಿ ಆ ಸಂದರ್ಶನದಲ್ಲಿ ಹೇಳುತ್ತಾರೆ ಎಂದ ರಾಹುಲ್‌ ಗಾಂಧಿ ಚುನಾವಣಾ ಬಾಂಡ್‌ಗಳ ಕುರಿತು ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿ, ಹಾಗಿದ್ದರೆ ಈ ಯೋಜನೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು ಏಕೆ? ನೀವು ಪಾರದರ್ಶಕತೆ ತರಲು ಬಯಸಿದರೆ ನೀವು ಬಿಜೆಪಿಗೆ ಹಣ ನೀಡಿದವರ ಹೆಸರನ್ನು ಹಾಗೂ ದಿನಾಂಕಗಳನ್ನು ಏಕೆ ಮರೆಮಾಡಿದ್ದೀರಿ ಎಂದು ಪ್ರಶ್ನಿಸಿದರು.

ಚುನಾವಣಾ ಬಾಂಡ್‌ ದೇಶದ ಅತಿದೊಡ್ಡ ಸುಲಿಗೆ ಯೋಜನೆಯಾಗಿದೆ. ಭಾರತದ ಎಲ್ಲಾ ಉದ್ಯಮಿಗಳಿಗೂ ಇದರ ಅರಿವಾಗಿದೆ. ಪ್ರಧಾನಿ ಎಷ್ಟೇ ಸ್ಪಷ್ಟೀಕರಣವನ್ನು ನೀಡಲು ಪ್ರಯತ್ನ ಮಾಡಿದರೂ ಕೂಡ ಏನೂ ಬದಲಾವಣೆಯಾಗದು. ಏಕೆಂದರೆ ಈ ಯೋಜನೆಯಲ್ಲಿ ಪ್ರಧಾನಿಯೇ ಭ್ರಷ್ಟಾಚಾರದ ಚಾಂಪಿಯನ್ ಎಂದು ಇಡೀ ದೇಶಕ್ಕೆ ತಿಳಿದಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಬಿಜೆಪಿ ಎಷ್ಟು ಕ್ಷೇತ್ರದಲ್ಲಿ ಗೆಲುವಾಗಲಿದೆ ಎಂಬ ಭವಿಷ್ಯವನ್ನು ಹೇಳುವುದಿಲ್ಲ. ಬಿಜೆಪಿ ಸುಮಾರು 180 ಸ್ಥಾನಗಳನ್ನು ಗೆಲ್ಲುತ್ತದೆ ಎಂದು 15-20 ದಿನಗಳ ಹಿಂದೆ ನಾನು ಭಾವಿಸಿದ್ದೆ. ಆದರೆ ಈಗ ಬಿಜೆಪಿ 150 ಸ್ಥಾನಗಳನ್ನು ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಪಡಿಸಲು ಪ್ರಯತ್ನಿಸುತ್ತಿದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ. ಇತ್ತ ಇಂಡಿಯಾ ಮೈತ್ರಿಕೂಟ ಮತ್ತು ಕಾಂಗ್ರೆಸ್ ಪಕ್ಷವು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ದೇಶದಲ್ಲಿ ನಿರುದ್ಯೋಗ, ಬಡತನ, ಹಣದುಬ್ಬರದಂತಹ ಪ್ರಮುಖ ಸಮಸ್ಯೆಗಳಿವೆ. ಆದರೆ ಪ್ರಧಾನಿ ಅಥವಾ ಬಿಜೆಪಿ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟೀಕಿಸಿದರು.

ಈ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್ ಮೈತ್ರಿಯಾಗಿ ಸ್ಪರ್ಧಿಸುತ್ತಿವೆ. ಒಟ್ಟು 80 ಲೋಕಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 17 ಸ್ಥಾನಗಳಲ್ಲಿ, ಎಸ್‌ಪಿ ಮತ್ತು ಇತರ ಕೆಲವು ಮಿತ್ರಪಕ್ಷಗಳು ಉಳಿದ 63 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ.

Tags: