Mysore
24
haze

Social Media

ಶನಿವಾರ, 06 ಡಿಸೆಂಬರ್ 2025
Light
Dark

ಕರ್ನಾಟಕದಲ್ಲಿ ಬಿಹಾರ ಫಲಿತಾಂಶ ಮರುಕಳಿಸಲಿದೆ : ಎಚ್‌.ಡಿ.ಕುಮಾರವಸ್ವಾಮಿ 

ಹೊಸದಿಲ್ಲಿ : ವೋಟ್‌ ಚೋರಿ ಎನ್ನುವ ಸುಳ್ಳು ಸಂಕಥನ ಸೃಷ್ಟಿಸಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಬಿಹಾರ ಮತದಾರರು ತಕ್ಕಪಾಠ ಕಲಿಸಿದ್ದಾರೆ ಎಂದು ಕೆಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದ್ದಾರೆ.

ಇಲ್ಲಿನ  ತಮ್ಮ ಗೃಹ ಕಚೇರಿಯಲ್ಲಿ ಶುಕ್ರವಾರ ಸಂಜೆ ಬಿಹಾರ ಫಲಿತಾಂಶದ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು ಸಚಿವರು, ಕಾಂಗ್ರೆಸ್‌ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡು ಸುಳ್ಳಿನ ಕಥೆಗಳನ್ನೇ ಸೃಷ್ಟಿಸಿ ಅಪಪ್ರಚಾರ ನಡೆಸಿತು. ಬಿಹಾರದ ಪ್ರಭುದ್ಧ ಮತದಾರರು ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿ ಆ ಪಕ್ಷಕ್ಕೆ ಕಪಾಳಮೋಕ್ಷ ಮಾಡಿದ್ದಾರೆಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಪರ ಆಡಳಿತ ಹಾಗೂ ೨೦೪೭ಕ್ಕೆ ವಿಕಸಿತ ಭಾರತ ಸಾಕಾರ ಆಗಬೇಕೆನ್ನುವ ಅವರ ದೃಢ ಸಂಕಲ್ಪಕ್ಕೆ ಬಿಹಾರದ ಜನತೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಇದಕ್ಕಾಗಿ ನಾನು ಅಲ್ಲಿನ ಜನರನ್ನು ಅಭಿನಂದಿಸುತ್ತೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಲಿಷ್ಠ ಎನ್‌ಡಿಎ ಮೈತ್ರಿಕೂಟವು ಸ್ವಾತಂತ್ರ್ಯೋತ್ತರ ಭಾರತದಲ್ಲಿಯೇ ಹಿಂದೆಂದೂ ಕಂಡಿರದ ದಾಖಲೆ ವಿಜಯವನ್ನು ಸಾಧಿಸಿದೆ. ಮೋದಿ ಅವರೊಂದಿಗೆ ಮೈತ್ರಿಕೂಟದ ಜಯಕ್ಕಾಗಿ ಅವಿರತವಾಗಿ ದುಡಿಮೆ ಮಾಡಿದ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್, ಗೃಹ ಸಚಿವರಾದ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ಚಿರಾಗ್‌ ಪಾಸ್ವಾನ್‌ ಹಾಗೂ ಜಿತಿನ್‌ ಕುಮಾರ್‌ ಮಾಂಜಿ ಅವರನ್ನು ನಾನು ಅಭಿನಂಧಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಇದನ್ನು ಓದಿ : ನಿತೀಶ್ ಮತ್ತೆ ಬಿಹಾರ್ ಸಿಎಂ?

ಕರ್ನಾಟಕದಲ್ಲಿ ಬಿಹಾರದ ಫಲಿತಾಂಶ ಮರುಕಳಿಸಲಿದೆ:

ಬಿಹಾರದಲ್ಲಿ ಎನ್‌ಡಿಎ ಪರ ಬಂದಿರುವ ಈ ಐತಿಹಾಸಿಕ ವಿಜಯವೂ ಮುಂಬರುವ ಕರ್ನಾಟಕದ ವಿಧಾನಸಭೆ ಚುನಾವಣೆ ಮೇಲೆಯೂ ಗಾಢ ಪ್ರಭಾವ ಬೀರಲಿದೆ. ಜೆಡಿಎಸ್‌- ಬಿಜೆಪಿ ಮೈತ್ರಿಕೂಟವೂ ಮುಂದಿನ ಚುನಾವಣೆಯಲ್ಲಿ ಉತ್ತಮ ಬಹುಮತದೊಂದಿಗೆ ಸರಕಾರ ಮಾಡುವುದು ಶತಃಸಿದ್ಧ ಎಂದರು ಕೇಂದ್ರ ಸಚಿವರು.

ಈಗಾಗಲೇ ರಾಜ್ಯ ಕಾಂಗ್ರೆಸ್‌ ಸರಕಾರ ಆಡಳಿತ ವಿರೋಧಿ ಅಲೆಯಿಂದ ನರಳುತ್ತಿದೆ. ಕಳೆದ ಎರಡೂವರೆ ವರ್ಷದಿಂದ ನಾಯಕತ್ವ ಬದಲಿಸುವುದರಲ್ಲೇ ಕಾಂಗ್ರೆಸ್ ಕಾಲಹರಣ ಮಾಡಿದೆ. ಜನರು ಭ್ರಮನಿರಸಗೊಂಡಿದ್ದು, ಬಹಳ ನಿರೀಕ್ಷೆ ಇಟ್ಟುಕೊಂಡು 136 ಸ್ಥಾನ ಕೊಟ್ಟಿದ್ದಕ್ಕೆ ನಿರಾಶರಾಗಿದ್ದಾರೆ. ರಾಜ್ಯದ ಜನರು ಯಾವಾಗ ಚುನಾವಣೆ ಬರುತ್ತದೋ ಎಂದು ನೋಡುತ್ತಿದ್ದಾರೆ. ಕಾಂಗ್ರೆಸ್ಸಿಗೆ ಪಾಠ ಕಲಿಸಲು ಮಾನಸಿಕವಾಗಿ ಸಿದ್ದವಾಗಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದಲ್ಲಿ ಎನಡಿಎ ಮೈತ್ರಿಕೂಟ ಬಲಿಷ್ಠವಾಗಿದೆ. ಬಿಜೆಪಿ- ಜೆಡಿಎಸ್ ನಾಯಕರೆಲ್ಲರೂ ಒಂದೇ ವೇದಿಕೆಯಲ್ಲಿ ಹೋಗುತ್ತಿದ್ದೇವೆ. ಬಿಹಾರದಂತೆಯೇ ಕರ್ನಾಟಕದಲ್ಲಿಯೂ ದಾಖಲೆಯ ಫಲಿತಾಂಶ ಪಡೆಯಲು ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೆಲಸ ಮಾಡುತ್ತೇವೆ. ಬಿಹಾರದ ದಾಖಲೆಯನ್ನು ಮುರಿಯುವ ರೀತಿಯಲ್ಲಿ ಕೆಲಸ ಮಾಡುತ್ತೇವೆ ಎಂದು ಕೇಂದ್ರ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಮತ ಚೋರಿ ಭಜನೆಯನ್ನು ನಿಲ್ಲಿಸಿ ಎಂದು ಬಿಹಾರದ ಜನ ಕಾಂಗ್ರೆಸ್ಸಿಗೆ ಹೇಳಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇವರು 136 ಸೀಟು ಗೆಲ್ಲುತ್ತೇವೆ ಎಂದು ಹೇಳಿದ್ದರು. ಅಷ್ಟು ಕರಾರುವಕ್ಕಾಗಿ ಹೇಳಲು ಇವರೇನಿ ತ್ರಿಕಾಲ ಜ್ಞಾನಿಗಳಾ? ಇವರೇನು ಚುನಾವಣಾ ಆಯೋಗದ ಸಹಾಯ ಪಡೆದು ಗೆದ್ದಿದ್ದರಾ? ಫಲಿತಾಂಶ ಬರುವುದಕ್ಕೆ ಮೊದಲು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದರಲ್ಲಾ, ಅದರ ಅರ್ಥವೇನು? ಇನ್ನಾದರೂ ಕಾಂಗ್ರೆಸ್‌ ನಾಯಕರು ದುರಾಹಾಂಕರ ಮಾತುಗಳನ್ನು ನಿಲ್ಲಿಸುವುದು ಒಳ್ಳೆಯದು ಎಂದು ಕುಮಾರಸ್ವಾಮಿ ಅವರು ಹೇಳಿದರು.

Tags:
error: Content is protected !!