ಬಿಹಾರ : ನವೆಂಬರ್ 6ರಂದು ಬಿಹಾರದಲ್ಲಿ ಮೊದಲ ಹಂತದ ಚುನಾವಣೆ ನಡೆದಿದ್ದು, ಇದೇ 11 ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ಈ ನಡುವೆ ಮೊನ್ನೆ ನಡೆದ ಚುನಾವಣೆಯ ವಿವಿಪ್ಯಾಟ್ ಚೀಟಿಗಳ ರಾಶಿಗಳು ಬಿಹಾರದ ಸಮಸ್ತಿಪುರ ಜಿಲ್ಲೆಯ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಚುನಾವಣಾ ಅಧಿಕಾರಿಯನ್ನು ಶನಿವಾರ ಅಮಾನತುಗೊಳಿಸಿದಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸಮಸ್ತಿಪುರ ಜಿಲ್ಲೆಯ ಸರಾಯ್‌ರಂಜನ್ ವಿಧಾನಸಭಾ ಕ್ಷೇತ್ರದ ಕಾಲೇಜು ಬಳಿ ರಸ್ತೆ ಬದಿಯಲ್ಲಿ ಚೀಟಿಗಳು ಬಿದ್ದಿರುವುದು ಕಂಡು ಬಂದಿದೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಬಳಿಕ ಚುನಾವಣಾ ಆಯೋಗ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಚುನಾವಣಾ ಆಯೋಗ, ವಿಡಿಯೊದಲ್ಲಿ ಹರಿದಾಡಿರುವ ವಿವಿಪ್ಯಾಟ್ ಅಣಕು ಮತದಾನದ ಸ್ಲಿಪ್‌ಗಳಾಗಿದ್ದು, ಮತದಾನ ಪ್ರಕ್ರಿಯೆಗೆ ಯಾವುದೇ ಧಕ್ಕೆ ಉಂಟಾಗಿಲ್ಲ. ಆದರೂ, ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಪ್ರಕರಣದ ಬಗ್ಗೆ ತನಿಖೆ ಆರಂಭವಾಗಿದೆ ಎಂದು ಸ್ಪಷ್ಟಪಡಿಸಿದೆ.





