ನವದೆಹಲಿ: 2001ರಲ್ಲಿ ಹಳೆ ಸಂಸತ್ ಮೇಲೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ದಾಳಿ ನಡೆಸಿ, 23 ವರ್ಷಗಳು ಕಳೆದಿದ್ದು, ದಾಳಿ ವೇಳೆ ಹುತಾತ್ಮರಾದ ವೀರ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಪುಷ್ಪ ನಮನ ಸಲ್ಲಿಸಿದ್ದಾರೆ.
ಹಳೆ ಸಂಸತ್ ಭವನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ಸುಮಾರು 23 ವರ್ಷಗಳು ಕಳೆದಿವೆ. ಈ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಇಂದು(ಡಿ.13) ಹಳೆ ಸಂಸತ್ ಭವನ ಹೊರಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಪುಷ್ಪ ನಮನ ಮಾಡಿದ್ದಾರೆ.
ಈ ವೇಳೆ ಲೋಕಸಭೆಯ ಸಭಾಪತಿ ಓಂ ಬಿರ್ಲಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಅಮಿತ್ ಶಾ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೇರಿದಂತೆ ಕೇಂದ್ರ ಸಚಿವರು ಮತ್ತು ಸಂಸದರು ಭಾಗವಹಿಸಿದ್ದರು. ಬಳಿಕ ಕೆಲ ಕಾಲ ಮೌನ ಆಚರಣೆ ಮಾಡಿ ಸಿಐಎಸ್‌ಎಫ್ ಸಿಬ್ಬಂದಿಯಿಂದ ಗೌರವ ಸಲ್ಲಿಸಲಾಯಿತು.
ಇನ್ನು ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, 2001ರಲ್ಲಿ ಸಂಸತ್ತಿನ ಮೇಲೆ ದಾಳಿ ನಡೆಯಿತು. ಆ ದಾಳಿಯಲ್ಲಿ ಯೋಧರು ತಮ್ಮ ಪ್ರಾಣವನ್ನು ತ್ಯಾಗಮಾಡಿ ಸಚಿವರು ಹಾಗೂ ಸಂಸದರನ್ನು ರಕ್ಷಣೆ ಮಾಡಿದ್ದಾರೆ. ಅವರ ಆ ತ್ಯಾಗ ನಮ್ಮ ರಾಷ್ಟ್ರಪ್ರೇಮವನ್ನು ಸದಾ ನೆನಪಿಸುತ್ತದೆ. ಹೀಗಾಗಿ ನಾವು ಅವರ ಧೈರ್ಯ ಹಾಗೂ ಸಮರ್ಪಣೆಗಾಗಿ ಕೃತಜ್ಞರಾಗಿರುತ್ತೇವೆ ಎಂದು ತಿಳಿಸಿದ್ದಾರೆ.





