ಚಂಡೀಗಢ: ಭಾರತದಲ್ಲಿ ಸಂವಿಧಾನ ಇರುವವರೆಗೂ ಒಂದು ದೇಶ, ಒಂದೇ ಚುನಾವಣೆ ಜಾರಿ ಅಸಾಧ್ಯ. ಒಂದು ವೇಳೆ ಅದನ್ನು ಜಾರಿಗೆ ತರುವುದಾದರೆ ಸಂವಿಧಾನಕ್ಕೆ ಕನಿಷ್ಠ 5 ತಿದ್ದುಪಡಿಗಳ ಅವಶ್ಯಕತೆ ಇದೆ ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಪ್ರಧಾನಿ ಮೋದಿ ತಮ್ಮ ಅವಧಿಯಲ್ಲಿಯೇ ಒಂದು ದೇಶ, ಒಂದು ಚುನಾವಣೆ ಜಾರಿಗೆ ತರುವ ಹೇಳಿಕೆ ನೀಡಿದ್ದಾರೆ. ಆದರೆ, ಸಂವಿಧಾನ ತಿದ್ದುಪಡಿ ಮಾಡುವ ಅವರ ಯೋಜನೆಗೆ ಬೆಂಬಲ ಸೂಚಿಸುವಷ್ಟು ಸಂಖ್ಯೆ ಲೋಕಸಭೆಯಲ್ಲಾಗಲಿ ಅಥವಾ ರಾಜ್ಯಸಭೆಯಲ್ಲಾಗಲಿ ಇಲ್ಲ. ದೇಶದಲ್ಲಿ ಒಂದು ದೇಶ, ಒಂದು ಚುನಾವಣೆ ಜಾರಿಗೊಳಿಸುವುದೇ ಆದರೆ ಅದಕ್ಕೆ ಇಂಡಿಯಾ ಒಕ್ಕೂಟದ ವಿರೋಧವಿದೆ ಎಂದು ಹೇಳಿದ್ದಾರೆ.
ಮೀಸಲಾತಿಯ ಕುರಿತು ಪ್ರಧಾನಿ ಮೋದಿ ಹೇಳಿಕೆಯ ಕಾಂಗ್ರೆಸ್ ಪಕ್ಷ ಮೀಸಲಾತಿ ರದ್ದತಿಯನ್ನು ಬಯಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಚಿದಂಬರಂ ಅವರು ʼಮೀಸಲಾತಿಯನ್ನು ನಾವೇಕೆ ರದ್ದು ಮಾಡುತ್ತೇವೆʼ ಎಂದು ಮರು ಪ್ರಶ್ನಿಸಿದ್ದಾರೆ.
ಭಾರತದಲ್ಲಿ ಜಾತಿಗಣತಿ ಆಧಾರದ ಮೇಲೆ ಮೀಸಲಾತಿ ಜಾರಿಗೆ ತರಬೇಕು ಎಂದು ಪ್ರಥಮ ಬಾರಿಗೆ ಘೋಷಿಸಿದ್ದೇ ಕಾಂಗ್ರೆಸ್ ಪಕ್ಷ. ನಾವು ಕೇವಲ ಮೀಸಲಾತಿಗೆ ಇರುವ ಶೇ.50ರಷ್ಟು ಮಿತಿಯನ್ನು ಮಾತ್ರ ತೆಗೆದು ಹಾಕುತ್ತೇವೆ ಎಂದು ಹೇಳಿದ್ದೇವೆ ಅಷ್ಟೇ. ನಮ್ಮ ಬೇಡಿಕೆ ಇರುವುದು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ತರಬೇಕು. ಈ ಬಗ್ಗೆ ಮೋದಿ ಅವರು ಹೇಳುವ ಮಾತುಗಳನ್ನು ನಂಬಬೇಡಿ ಎಂದರು.
ಮೋದಿ ಹೇಳಿದ್ದೇನು..?
ಭಾನುವಾರ ಕುರುಕ್ಷೇತ್ರದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ದಲಿತರ ಮೀಸಲಾತಿಯನ್ನು ಕಸಿದುಕೊಳ್ಳಲು ʼರಾಜ ಕುಟುಂಬʼ ಬಯಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾನು ಇರುವವರೆಗೂ, ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಮೀಸಲಾತಿಗಳನ್ನೂ ಬದಲಾಯಿಸಲು ಅವಕಾಶ ದೊರೆಯುವುದಿಲ್ಲ ಎಂದು ಹೇಳಿದ್ದರು.
ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ʼಸತತ ಚುನಾವಣೆಗಳು ರಾಷ್ಟ್ರದ ಅಭಿವೃದ್ಧಿಗೆ ಆಡಚಣೆ ಉಂಟು ಮಾಡುತ್ತವೆ. ಹೀಗಾಗಿ ಒಂದು ದೇಶ, ಒಂದು ಚುನಾವಣೆ ಭಾರತಕ್ಕೆ ಅಗತ್ಯʼ ಎಂಬ ಹೇಳಿಕೆಯನ್ನು ನೀಡಿದ್ದರು.