ಜಮ್ಮು-ಕಾಶ್ಮೀರ: ಇಲ್ಲಿನ ಬಂಡಿಪೋರಾ ಜಿಲ್ಲೆಯಲ್ಲಿ ಸೇನಾ ವಾಹನ ಕಮರಿಗೆ ಬಿದ್ದ ಪರಿಣಾಮ ಇಬ್ಬರು ಸೇನಾ ಯೋಧರು ಮೃತ ಪಟ್ಟಿದ್ದು, ಮೂವರು ಯೋಧರಿಗೆ ಗಂಭೀರ ಗಾಯಗೊಂಡಿದ್ದಾರೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
ಉತ್ತರ ಕಾಶ್ಮೀರ ಜಿಲ್ಲೆಯ ಎಸ್.ಕೆ.ಪಯೆನ್ ಸಮೀಪ ಸೇನಾ ವಾಹನವೂ ರಸ್ತೆಯಿಂದ ಆಯಾ ತಪ್ಪಿ ಕಮರಿಗೆ ಬಿದ್ದಿದೆ. ಈ ಘಟನೆಯಲ್ಲಿ ಗಾಯಗೊಂಡ ಮೂವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲದೇ ಈ ದುರ್ಘಟನೆಯಲ್ಲಿ ಇಬ್ಬರು ಯೋಧರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಘಟನೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮಸ್ರತ್ ಇಕ್ಬಾಲ್ ಅವರು, ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ. ಗಾಯಗೊಂಡ ಮೂವರು ಸೈನಿಕರಿಗೆ ಚಿಕಿತ್ಸೆ ನೀಡಿದ ನಂತರ ಶ್ರೀನಗರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯ ರಸ್ತೆ ಅಪಘಾತದಲ್ಲಿ ಕರ್ನಾಟಕದ ಮೂವರು ಯೋಧರು ಮೃತಪಟ್ಟಿದ್ದರು.





