ಹೊಸದಿಲ್ಲಿ: ಕೃಷಿ ಸಾಲ ಮನ್ನಾ, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸೇರಿದಂತೆ ಇನ್ನಿತರ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿರುವ ರೈತರು ತಮ್ಮ ಹೋರಾಟವನ್ನು ತೀವ್ರಗೊಳಿಸುತ್ತಿದ್ದಂತೆ, ಇತ್ತ ಕೇಂದ್ರ ಸರ್ಕಾರವು ಎಲ್ಲಾ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಗೆ(ಎಂಎಸ್ ಪಿ) ಖರೀದಿಸಲಿದೆ ಎಂದು ಘೋಷಿಸಿದೆ.
ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ರೈತರಿಗೆ ಎಂಎಸ್‌ಪಿ ಸಮಸ್ಯೆಯ ಕುರಿತು ಪೂರಕ ಪ್ರಶ್ನೆಗಳಗೆ ಉತ್ತರಿಸಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಮೋದಿ ಸರ್ಕಾರವು ಎಲ್ಲಾ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲಬೆಲೆಗೆ ಖರೀದಿಸಲಿದೆ ಎಂದು ದೃಢಪಡಿಸಿದರು. ಎಂಎಸ್‌ಪಿಗೆ ಕಾನೂನು ಬೆಂಬಲಕ್ಕೆ ಒತ್ತಾಯಿಸಿ ರೈತರು ದೆಹಲಿಗೆ ರೈತರ ಕಾಲ್ನಡಿಗೆಯ ನಂತರ ಈ ಭರವಸೆ ನೀಡಲಾಯಿತು.
ಪ್ರತಿಪಕ್ಷಗಳು ಎಂದಿಗೂ ರೈತರನ್ನು ಗೌರವಿಸಿಲ್ಲ. ಆದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2019 ರಿಂದ ರೈತರಿಗೆ ಉತ್ಪಾದನಾ ವೆಚ್ಚದ ಮೇಲೆ ಶೇ. 50ರಷ್ಟು ಲಾಭವನ್ನು ನೀಡುವ ಮೂಲಕ ಕನಿಷ್ಠ ಬೆಂಬಲ ಬೆಲೆ ಲೆಕ್ಕಹಾಕಲು ನಿರ್ಧರಿಸಿದ್ದಾರೆ ಎಂದು ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸದನದಲ್ಲಿ ಹೇಳಿದರು.
ಬಳಿಕ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ತಮ್ಮ ಈ ಘೋಷಣೆಗಳನ್ನು ಬೆಂಬಲಿಸುವ ದಾಖಲೆಗಳನ್ನು ಸಲ್ಲಿಸುವಂತೆ ಹೇಳಿದರು. ಶಿವರಾಜ್ ಸಿಂಗ್ ಚೌಹಾಣ್ ಅದಕ್ಕೆ ಸಮ್ಮತಿ ಸೂಚಿಸಿದರು.





