ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾರ್ಜ್‌ಶೀಟ್ ಬಿಡುಗಡೆ ಮಾಡಿದ್ದಾರೆ.
ಕೋಲ್ಕತ್ತಾದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಬಿಜೆಪಿ ಧ್ವನಿ ನೀಡುತ್ತಿರುವ ಬಂಗಾಳದ ಜನರ ಚಾರ್ಜ್‌ಶೀಟ್ ಎಂದು ಬಣ್ಣಿಸಿದ್ದಾರೆ.
ಮುಂಬರುವ ಚುನಾವಣೆಗಳು ರಾಜ್ಯಕ್ಕೆ ಮಾತ್ರವಲ್ಲ. ದೇಶಕ್ಕೂ ನಿರ್ಣಾಯಕವಾಗಿದೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದಾಗಿದೆ.. ಅದಕ್ಕಾಗಿ ಮುಂಬರುವ ಚುನಾವಣೆಯಲ್ಲಿ ಭಯ ಬೇಕಾ ಅಥವಾ ಭರವಸೆ ಬೇಕಾ ಎಂಬುದನ್ನು ಬಂಗಾಳದ ಜನ ನಿರ್ಧರಿಸಬೇಕು ಎಂದು ಕರೆ ನೀಡಿದರು.
ಇನ್ನು ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೆಲವೊಮ್ಮೆ ಅವರಿಗೆ ಕಾಲು ಮುರಿಯುತ್ತೆ. ಕೆಲವೊಮ್ಮೆ ತಲೆಗೆ ಬ್ಯಾಂಡೇಜ್ ಬರುತ್ತೆ. ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಚುನಾವಣಾ ಆಯೋಗವನ್ನು ನಿಂದಿಸುತ್ತಾರೆ. ಹೀಗೇ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.





