ಹೊಸದಿಲ್ಲಿ : ಕೃತಕ ಬುದ್ಧಿಮತ್ತೆಗೆ ಗುಲಾಮರಾಗಬೇಡಿ ಬದಲಿಗೆ ಅದನ್ನು ಸಾಮರ್ಥ್ಯವೃದ್ಧಿಗೆ ಬಳಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿ ಸಮುದಾಯಕ್ಕೆ ಸಲಹೆ ನೀಡಿದ್ದಾರೆ.
ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದ ಎರಡನೇ ಸಂಚಿಕೆಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ ಅವರು, ಸ್ಟಾರ್ಟ್‌ಅಪ್‌ಗಳಿಂದ ಹಿಡಿದು ಪರೀಕ್ಷಾ ತಯಾರಿಯವರೆಗೆ ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದ್ದಾರೆ.
ತಂತ್ರಜ್ಞಾನ ಬಂದ ಪ್ರತಿಯೊಂದು ಯುಗದಲ್ಲೂ ಇಂತಹ ಚರ್ಚೆಗಳು ಉದ್ಭವಿಸುತ್ತವೆ, ನಾವು ಅದರ ಬಗ್ಗೆ ಭಯಪಡಬಾರದು. ಅದರ ಗುಲಾಮರಾಗಲು ನಾವು ಶ್ರಮಿಸಬಾರದು. ಅದು ನಮ್ಮ ಯಜಮಾನರಾಗಲು ನಾವು ಬಿಡುವುದಿಲ್ಲ. ನೀವು ಅದರ ಗುಲಾಮರಾಗದಂತೆ ನೋಡಿಕೊಳ್ಳಬೇಕು ಎಂದರು.
ಉದ್ಯೋಗಗಳ ಸ್ವರೂಪ ಬದಲಾಗುತ್ತಲೇ ಇರುತ್ತದೆ. ಆದ್ದರಿಂದ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳಬೇಕು ನಾವು ಭಯಪಡಬೇಕಾಗಿಲ್ಲ ಎಂದು ಸಲಹೆ ನೀಡಿದ್ದಾರೆ.
ಪರೀಕ್ಷಾ ಪೆ ಚರ್ಚಾ 2026ರ ಎರಡನೇ ಸಂಚಿಕೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ವಿದ್ಯಾರ್ಥಿಗಳೊಂದಿಗೆ ತಮ್ಮ ಸಂವಾದವನ್ನು ಪ್ರಾರಂಭಿಸಿದರು. ಛತ್ತಿಸ್‌ಗಢದ ವಿದ್ಯಾರ್ಥಿಯೊಬ್ಬರು ಭಾರತದಲ್ಲಿ ಭೇಟಿ ನೀಡಲು ಉತ್ತಮ ಸ್ಥಳಗಳ ಬಗ್ಗೆ ಕೇಳಿದರು. ಪ್ರಧಾನಿ ಮೋದಿ ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದರು.
ಸ್ಛೂರ್ತಿಯ ಜೊತೆಗೆ ಶಿಸ್ತು ಕೂಡ ಅತ್ಯಗತ್ಯ ಎಂದ ಪ್ರಧಾನಿ ಶಿಸ್ತು ಇಲ್ಲದಿದ್ದರೆ, ಯಾವುದೇ ಸ್ಛೂರ್ತಿ ಕೆಲಸ ಮಾಡುವುದಿಲ್ಲ. ರೈತ ತನ್ನ ಪಕ್ಕದಲ್ಲಿರುವ ರೈತನಿಂದ ಸ್ಛೂರ್ತಿ ಪಡೆದು, ತಾನು ಕೂಡ ಸಂಪಾದಿಸುವ ಛಲ ಬೆಳೆಸಿಕೊಳ್ಳುತ್ತಾರೆ. ಶಿಸ್ತು ಇಲ್ಲದೆ, ಸ್ಛೂರ್ತಿ ಕೆಲಸ ಮಾಡುವುದಿಲ್ಲ, ನೋಡಿದಾಕ್ಷಣ ಸ್ಛೂರ್ತಿ ಸಿಗುವುದಿಲ್ಲ, ಆ ಹಾದಿಯಲ್ಲೇ ನಡೆಯುವುದು ಕೂಡ ಮುಖ್ಯವಾಗುತ್ತದೆ ಎಂದಿದ್ದಾರೆ.
ಸ್ಟಾರ್ಟ್‌ಅಪ್ ಪ್ರಾರಂಭಿಸುವುದು ಹೇಗೆ ಎಂಬ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ಇಂದು ನಾನು ಕಷ್ಟಪಟ್ಟು ವಿಕಸಿತ ಭಾರತದ ಬುನಾದಿ ಹಾಕುತ್ತಿರುವುದು ನಿಮಗಾಗಿ. ನೀವು ಸಣ್ಣ ಸ್ಟಾರ್ಟ್‌ಅಪ್ ಶುರು ಮಾಡಬಹುದು. ನೀವು ನಿಮ್ಮ ಅಧ್ಯಯನ ಮತ್ತು ನಿಮ್ಮ ವೃತ್ತಿಜೀವನ ಎರಡನ್ನೂ ಮುಂದುವರಿಸಲು ಬಯಸಿದರೆ, ನೀವು ಪ್ರತಿ ವಾರ ನಿಮ್ಮ ವೃತ್ತಿಜೀವನಕ್ಕೆ ಸ್ವಲ್ಪ ಸಮಯವನ್ನು ಮೀಸಲಿಡಲು ಪ್ರಾರಂಭಿಸಬೇಕು ಎಂದರು.
ಪರೀಕ್ಷೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಹಿಂದಿನ ಪತ್ರಿಕೆಗಳನ್ನು ಅಭ್ಯಾಸ ಮಾಡಿ ಮತ್ತು ಉತ್ತಮ ನಿದ್ರೆ ಮಾಡುವಂತೆ ಪ್ರಧಾನಿ ವಿದ್ಯಾರ್ಥಿಗಳನ್ನು ಒತ್ತಾಯಿಸಿದರು. ಪರೀಕ್ಷೆಗಳಿಗೆ ಚೆನ್ನಾಗಿ ತಯಾರಿ ನಡೆಸಿದ ನಂತರ ನೀವು ಎಂದಿಗೂ ಉದ್ವಿಗ್ನತೆಯನ್ನು ಅನುಭವಿಸುವುದಿಲ್ಲ. ರಾತ್ರಿಯ ಉತ್ತಮ ನಿದ್ರೆಯು ದಿನದ ಉಳಿದ ಸಮಯ ನಿಮ್ಮನ್ನು ಹರ್ಷಚಿತ್ತದಿಂದ ಇರಿಸುತ್ತದೆ ಎಂದು ಮೋದಿ ಹೇಳಿದರು.





