Mysore
19
clear sky

Social Media

ಶುಕ್ರವಾರ, 20 ಫೆಬ್ರವರಿ 2026
Light
Dark

ಎಐ ಭಾರತದ ಭವಿಷ್ಯ ; ನಿಯಂತ್ರಣ ನಮ್ಮ ಕೈಯಲ್ಲಿರಲಿ : ಪ್ರಧಾನಿ ಮೋದಿ

ಹೊಸದಿಲ್ಲಿ : ಮಾನವರು ಕೇವಲ ಡೇಟಾ ಪಾಯಿಂಟ್ ಅಥವಾ ಕಚ್ಚಾ ವಸ್ತುವಾಗದಂತೆ ನೋಡಿಕೊಳ್ಳಲು, ಎಐಯನ್ನು ಜನತಂತ್ರೀಕರಿಸಬೇಕು. ಇದು ವಿಶೇಷವಾಗಿ ಗ್ಲೋಬಲ್ ಸೌತ್ ರಾಷ್ಟ್ರಗಳಿಗೆ ಒಳಗೊಳ್ಳುವಿಕೆ ಮತ್ತು ಸಬಲೀಕರಣದ ಸಾಧನವಾಗಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್ 2026ರ ನಾಲ್ಕನೇ ದಿನ ಜಾಗತಿಕ ನಾಯಕರು ಮತ್ತು ತಂತ್ರಜ್ಞಾನ ತಜ್ಞರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದಲ್ಲಿ ಯಶಸ್ವಿಯಾಗುವ ಯಾವುದೇ ಎಐ ಮಾದರಿಯನ್ನು ವಿಶ್ವದ ಎಲ್ಲೆಡೆ ಬಳಸಬಹುದು ಎಂದರು.

ದಿಲ್ಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್ 2026 ವೇಳೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಗೂಗಲ್ ಸಿಇಒ ಸುಂದರ್ ಪಿಚೈ, ಓಪನ್‌ ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಸೇರಿದಂತೆ ಇತರ ತಂತ್ರಜ್ಞಾನ ನಾಯಕರೊಂದಿಗೆ ಕೈಜೋಡಿಸಿದರು.

ಕೃತಕ ಬುದ್ಧಿಮತ್ತೆ (AI)ಯ ಜನತಂತ್ರೀಕರಣಕ್ಕೆ ಕರೆ ನೀಡಿದರು. ಈ ಸಂದರ್ಭದಲ್ಲಿ ಅವರು ಭಾರತದ ‘ಮಾನವ್ ವಿಷನ್’ ನ್ನು ಅನಾವರಣಗೊಳಿಸಿದರು. ಈ ವಿಷನ್ ನಲ್ಲಿ ನೈತಿಕ ಮತ್ತು ನೀತಿಪರ ವ್ಯವಸ್ಥೆಗಳು, ಹೊಣೆಗಾರ ಆಡಳಿತ ಮತ್ತು ರಾಷ್ಟ್ರೀಯ ಸ್ವಾಯತ್ತತೆ ಒಳಗೊಂಡಿವೆ ಎಂದರು.

ಡೀಪ್‌ಫೇಕ್‌ಗಳು ಮತ್ತು ಕೃತಕವಾಗಿ ಸೃಷ್ಟಿಸಲಾದ ವಿಷಯಗಳು ಮುಕ್ತ ಸಮಾಜಗಳಲ್ಲಿ ಅಸ್ಥಿರತೆ ಉಂಟುಮಾಡುತ್ತವೆ. ಕೆಲವರು ಎಐ ಎಂದರೆ ಭಯಪಡುತ್ತಾರೆ, ಕೆಲವರು ಅದರಲ್ಲಿ ಭವಿಷ್ಯವನ್ನು ನೋಡುತ್ತಾರೆ. ಭಾರತ ಎಐಯಲ್ಲೇ ಭವಿಷ್ಯವನ್ನು ನೋಡುತ್ತಿದೆ ಎಂದು ಮೋದಿ ಹೇಳಿದರು.

ಎಐ ಹಂಚಿಕೊಂಡಾಗ ಮಾತ್ರ ಅದರ ಪ್ರಯೋಜನ ಎಲ್ಲರಿಗೂ ಸಿಗುತ್ತದೆ. ಅದನ್ನು ಜಾಗತಿಕ ಸಾಮಾನ್ಯ ಸಂಪತ್ತಾಗಿ ಅಭಿವೃದ್ಧಿಪಡಿಸುವ ಸಂಕಲ್ಪ ಮಾಡಬೇಕು. ಎಐಗೆ ಆಕಾಶದವರೆಗೆ ಮುಕ್ತ ವಾತಾವರಣ ಕಲ್ಪಿಸಿಕೊಡಬೇಕು, ಆದರೆ ಅದರ ನಿಯಂತ್ರಣ ನಮ್ಮ ಕೈಯಲ್ಲಿರಬೇಕು ಎಂದರು.

ಇದೇ ವೇಳೆ, ಆಹಾರ ಪ್ಯಾಕೆಟ್‌ಗಳ ಮೇಲಿರುವ ಪೌಷ್ಟಿಕ ಲೇಬಲ್‌ಗಳ ಮಾದರಿಯಲ್ಲಿ, ಎಐ ಮೂಲಕ ಸೃಷ್ಟಿಸಲಾದ ವಿಷಯಗಳಿಗೆ ಪ್ರಮಾಣಿಕೀಕೃತ ಲೇಬಲ್‌ಗಳು ಇರಬೇಕು ಎಂಬುದನ್ನು ಸೂಚಿಸಿದರು.

ವಿವಿಧ ದೇಶಗಳ ಗಣ್ಯರು ಭಾಗಿ
ದಿಲ್ಲಿಯ ಭಾರತ ಮಂಟಪದಲ್ಲಿ ನಡೆದ ಈ ಸಮಾವೇಶದಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಮಾನುಯೆಲ್ ಮ್ಯಾಕ್ರೋನ್, ಬ್ರೆಜಿಲ್ ಅಧ್ಯಕ್ಷ ಲುಯಿಜ್ ಇನಾಸಿಯೊ ಲುಲಾ ದ ಸಿಲ್ವಾ, ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ, ಭೂತಾನ್ ಪ್ರಧಾನಮಂತ್ರಿ ತ್ಶೆರಿಂಗ್ ಟೋಬ್ಗೇ, ಮಾರಿಷಸ್ ಪ್ರಧಾನಮಂತ್ರಿ ನವೀಂಚಂದ್ರ ರಾಮಗೂಲಾಮ್, ಕ್ರೊಯೇಶಿಯಾ ಪ್ರಧಾನಮಂತ್ರಿ ಆಂದ್ರೇಜ್ ಪ್ಲೆಂಕೋವಿಕ್, ಸರ್ಬಿಯಾ ಅಧ್ಯಕ್ಷ ಅಲೆಕ್ಸಾಂಡರ್ ವುಚಿಚ್, ಸೆಶೆಲ್ಸ್ ಉಪಾಧ್ಯಕ್ಷ ಸೆಬಾಸ್ಟಿಯನ್ ಪಿಲ್ಲೇ, ಎಸ್ಟೋನಿಯಾ ಅಧ್ಯಕ್ಷ ಅಲಾರ್ ಕರಿಸ್ ಮತ್ತು ಫಿನ್ಲ್ಯಾಂಡ್ ಪ್ರಧಾನಮಂತ್ರಿ ಪೆಟೇರಿ ಓರ್ಪೋ, ಗುಗಲ್‌ ಸಿಇಒ ಸುಂದರ್‌ ಪಿಚೈ ಸೇರಿದಂತೆ ಅನೇಕ ಜಾಗತಿಕ ನಾಯಕರು ಭಾಗವಹಿಸಿದ್ದರು.

 

 

 

Tags:
error: Content is protected !!