ನವದೆಹಲಿ: ಲೋಕಸಭೆ ಚುನಾವಣೆ ಬಳಿಕ ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಿರ್ಧರಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಶುಕ್ರವಾರ ಪಕ್ಷದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಬಾರಿಯ ಲೋಕಸಭೆ ಚುನಾವಣೆಯು ಸಂವಿಧಾನ ಮತ್ತು ಪ್ರಜಪ್ರಭುತ್ವವನ್ನು ನಾಶಪಡಿಸಲು ಪ್ರಯತ್ನಿಸುತ್ತಿರುವ ಹಾಗೂ ಅವುಗಳನ್ನು ರಕ್ಷಿಸುವ ಹೋರಾಡಿತ್ತಿರುವ ನಡುವೆ ನಡೆಯಲಿದೆ ಎಂದು ಅಭಿಪ್ರಾಯಪಟ್ಟರು.
ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವುದಕ್ಕಿಂತಲೂ ವಾಸ್ತವದಲ್ಲಿ ಹೆಚ್ಚು ನಿಕಟ ಸ್ಪರ್ಧೆಯಾಗಿದೆ ಎಂದಿರುವ ಅವರು ಜಯ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.
2004ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎಯ ಆಕ್ರಮಣಕಾರಿ ಇಂಡಿಯಾ ಶೈನಿಂಗ್ ಅಭಿಯಾನವನ್ನು ಉಲ್ಲೇಖಿಸಿದ ಅವರು, ಆ ಅಭಿಯಾನವನ್ನು ಯಾರು ಗೆದ್ದಿದ್ದಾರೆಂದು ನೆನಪಿಸಿಕೊಳ್ಳಿ ಎಂದು ಹೇಳಿದರು. ಅಂದಿನ ಚುನಾವಣೆಯಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಿತ್ತು.
ಇಂಡಿಯಾ ಮೈತ್ರಿಕೂಟವು ಸೈದ್ಧಾಂತಿಕ ಚುನಾವಣೆಯನ್ನು ಎದುರಿಸುತ್ತಿದೆ ಎಂದು ನಿರ್ಧರಿಸಿದೆ ಮತ್ತು ಚುನಾವಣೆಯ ನಂತರ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಇಂಡಿಯಾ ಒಕ್ಕೂಟ ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.