ನಾಸಿಕ್ : ಕರ್ನಾಟಕ-ಗೋವಾ ಗಡಿಯ ಚೋರ್ಲಾ ಘಾಟ್‌ನಲ್ಲಿ 2025ರ ಅಕ್ಟೋಬರ್‌ನಲ್ಲಿ ಸಂಚಲನ ಸೃಷ್ಟಿಸಿದ್ದ 400 ಕೋಟಿ ರೂಪಾಯಿ ದರೋಡೆ ಪ್ರಕರಣವೇ ಕಟ್ಟುಕಥೆ ಎಂದು ಮಹಾರಾಷ್ಟ್ರ ವಿಶೇಷ ತನಿಖಾ ತಂಡ (ಎಸ್‌ಐಟಿ) ತನ್ನ ವರದಿಯಲ್ಲಿ ತಿಳಿಸಿದೆ.
ದೂರುದಾರ ಸಂದೀಪ್ ದತ್ತಾ ಪಾಟೀಲ್ ಅವರ ಹೇಳಿಕೆಗಳಲ್ಲಿ ಗಂಭೀರ ವ್ಯತ್ಯಾಸಗಳು, ಕರೆ ವಿವರಗಳು, ಪ್ರಯಾಣ ಮಾರ್ಗ ಮತ್ತು ಸಮಯದಲ್ಲಿ ಹೋಲಿಕೆಯಾಗಿಲ್ಲ ಎಂದು ತನಿಖೆಯಲ್ಲಿ ಧೃಢಪಟ್ಟಿದೆ.
ನಾಸಿಕ್ ಜಿಲ್ಲೆಯ ಘೋಟಿ ಪೊಲೀಸ್ ಠಾಣೆಯಲ್ಲಿ ಜನವರಿ 1, 2026ರಂದು ಸಲ್ಲಿಸಲಾದ ದೂರಿನಲ್ಲಿ ಸಂದೀಪ್ ಪಾಟೀಲ್ (ನಾಸಿಕ್ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ) “ಗೋವಾದಿಂದ ಅಹಮದಾಬಾದ್‌ನ ಒಂದು ಆಶ್ರಮಕ್ಕೆ ಕರ್ನಾಟಕ ಮಾರ್ಗವಾಗಿ ಸಾಗಿಸುತ್ತಿದ್ದ ಎರಡು ಕಂಟೇನರ್ ಟ್ರಕ್‌ಗಳಲ್ಲಿ 400 ಕೋಟಿ ರೂಪಾಯಿ ಮೌಲ್ಯದ ರದ್ದಾದ 2,000 ರೂ.ನೋಟುಗಳನ್ನು ಚೋರ್ಲಾ ಘಾಟ್ ಬಳಿ (ಖಾನಾಪುರ ತಾಲೂಕು, ಬೆಳಗಾವಿ ಜಿಲ್ಲೆ) ದರೋಡೆ ಮಾಡಲಾಗಿದೆ. ನನ್ನನ್ನು ಅಪಹರಿಸಿ, ಹಲ್ಲೆ ನಡೆಸಿ ಬೆದರಿಕೆ ಹಾಕಲಾಗಿದೆ” ಎಂದು ಹೇಳಿದ್ದರು. ಬಳಿಕ ಠಾಣೆಗೆ ದೂರು ಸಹ ದಾಖಲಿಸಿದ್ದರು.
ಈ ದೂರಿನ ಬೆನ್ನಲ್ಲೇ ಮಹಾರಾಷ್ಟ್ರ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದರು – ಗುಜರಾತ್ ಮೂಲದ ಬಿಲ್ಡರ್ ಕಿಶೋರ್ ಸಾವಳೆ (ಹಣದ ಮಾಲೀಕ ಎಂಬ ಆರೋಪ), ಹವಾಲಾ ಏಜೆಂಟ್ ವಿರಾಟ್ ಗಾಂಧಿ, ಜಯೇಶ್ ಕಡಂ, ವಿಶಾಲ್ ನಾಯ್ಡು, ಸುನೀಲ್ ಧುಮಾಳ್, ಮಚ್ಚೀಂದ್ರ ಮಾಡವಿ ಮತ್ತು ಜನಾರ್ಧನ್ ಧಾಯ್ಗುಡೆ. ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತು. ಬೆಳಗಾವಿ, ಗೋವಾ ಮತ್ತು ಮಹಾರಾಷ್ಟ್ರ ಪೊಲೀಸರು ಸಂಯುಕ್ತ ತನಿಖೆ ನಡೆಸಿದ್ದರು. ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಅವರು “ಕರ್ನಾಟಕದಲ್ಲಿ ಯಾವುದೇ ದೂರು ಬಂದಿಲ್ಲ, ಸಾಕ್ಷ್ಯವೂ ಇಲ್ಲ” ಎಂದು ಸ್ಪಷ್ಟಪಡಿಸಿದ್ದರು.
ಮಹಾರಾಷ್ಟ್ರ ಸರ್ಕಾರ ಎಸ್‌ಐಟಿ ರಚಿಸಿ ಒಂದು ತಿಂಗಳ ಕಾಲ ತೀವ್ರ ತನಿಖೆ ನಡೆಸಿತು. ಡಿಜಿಟಲ್ ಆಧಾರಗಳು, ಕರೆ ವಿವರಗಳು (ಸಿಡಿಆರ್), ಜಿಪಿಎಸ್, ಪ್ರಯಾಣ ಮಾರ್ಗ, ಸಮಯ ವ್ಯತ್ಯಾಸಗಳು ಪರಿಶೀಲಿಸಲಾಯಿತು. ಬಾಹ್ಯ ಏಜೆನ್ಸಿಗಳಿಂದಲೂ ಯಾವುದೇ ದರೋಡೆ ನಡೆದಿಲ್ಲ ಎಂಬ ಮಾಹಿತಿ ಬಂದಿತು. “ಪ್ರಕರಣವೇ ಸುಳ್ಳು, ಯಾವುದೇ ಕಂಟೇನರ್ ದರೋಡೆಯಾಗಿಲ್ಲ” ಎಂದು ಎಸ್‌ಐಟಿ ವರದಿ ಮಹಾರಾಷ್ಟ್ರ ಸರ್ಕಾರಕ್ಕೆ ಸಲ್ಲಿಸಿದೆ.
ನಾಸಿಕ್‌ನ ಇಗತ್‌ಪುರಿ ನ್ಯಾಯಾಲಯವು ಏಳು ಆರೋಪಿಗಳನ್ನೂ ಸಾಕ್ಷ್ಯ ಕೊರತೆಯಿಂದ ಬಿಡುಗಡೆ ಮಾಡಿದೆ. ನಾಸಿಕ್ ಗ್ರಾಮೀಣ ಪೊಲೀಸರು ಈಗ ಸಂದೀಪ್ ಪಾಟೀಲ್ ವಿರುದ್ಧ ಸುಳ್ಳು ದೂರು ದಾಖಲಿಸಿದ ಆರೋಪದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ. ಪೊಲೀಸ್ ಸಂಪನ್ಮೂಲಗಳು ಒಂದು ತಿಂಗಳ ಕಾಲ ವ್ಯರ್ಥವಾಗಿವೆ ಎಂದು ಅಧಿಕಾರಿಗಳು ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣ ಜನವರಿಯಲ್ಲಿ ರಾಜಕೀಯ ವಿವಾದಕ್ಕೂ ಕಾರಣವಾಗಿತ್ತು. ಕರ್ನಾಟಕದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಗಡಿ ಸುರಕ್ಷತೆ, ಪೊಲೀಸ್ ತನಿಖೆ ಬಗ್ಗೆ ಆರೋಪ-ಪ್ರತ್ಯಾರೋಪಗಳು ನಡೆದಿದ್ದವು. ಈಗ ಎಲ್ಲವೂ ‘ಕಟ್ಟುಕಥೆ’ ಎಂದು ಸಾಬೀತಾಗಿದೆ.





