ನವದೆಹಲಿ: ಒಂದು ದೇಶ ಒಂದು ಚುನಾವಣೆ ಮಸೂದೆ ಪ್ರಸ್ತಾವನೆಯ ವೇಳೆ ಬಿಜೆಪಿಯ 20ಕ್ಕೂ ಹೆಚ್ಚು ಸಂಸದರು ಗೈರಾಗಿದ್ದ ಹಿನ್ನೆಲೆಯಲ್ಲಿ ಪಕ್ಷ ತನಿಖೆ ನಡೆಸಲು ಮುಂದಾಗಿದೆ.
ಒಂದು ದೇಶ ಒಂದು ಚುನಾವಣೆ ಮಸೂದೆಯನ್ನು ನಿನ್ನೆ ಸಂಸತ್‌ನಲ್ಲಿ ಮಂಡಿಸಲಾಗಿದ್ದು, ವಿಸ್ತೃತ ಚರ್ಚೆಗೆಂದು ಜಂಟಿ ಸದನ ಸಮಿತಿಗೆ ಶಿಫಾರಸು ಮಾಡಲಾಗಿದೆ.
ಮಸೂದೆಯ ಪ್ರಸ್ತಾವನೆಗೆ ಮತದಾನ ನಡೆದಿದ್ದು, ಮಸೂದೆ ಪರವಾಗಿ 269 ಮತಗಳು ಬಂದಿವೆ. ಮಸೂದೆಯ ವಿರುದ್ಧವಾಗಿ 198 ಮತಗಳು ಚಲಾವಣೆಯಾಗಿವೆ.
ಇನ್ನು ಅಚ್ಚರಿ ಎಂದರೆ ಎಲ್ಲಾ ಸಂಸದರಿಗೂ ವಿಪ್ ಜಾರಿಯಾಗಿದ್ದರೂ ಆಡಳಿತಾರೂಢ ಬಿಜೆಪಿಯ 20ಕ್ಕೂ ಹೆಚ್ಚು ಸಂಸದರು ಮತದಾನದ ವೇಳೆ ಗೈರು ಹಾಜರಾಗಿದ್ದರು.
ಒಂದು ದೇಶ ಒಂದು ಚುನಾವಣೆ ಮಸೂದೆ ವೇಳೆ ಸದನದಲ್ಲಿ ಎಲ್ಲರೂ ತಪ್ಪದೇ ಹಾಜರಿರಬೇಕು ಎಂದು ಬಿಜೆಪಿ ವಿಪ್ ಜಾರಿ ಮಾಡಿತ್ತು. ಆದರೆ 20ಕ್ಕೂ ಹೆಚ್ಚು ಬಿಜೆಪಿ ಸಂಸದರು ಗೈರಾಗುವ ಮೂಲಕ ಪಕ್ಷದ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ. ಈ ಮೂಲಕ ಸಂಸದರು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇನ್ನು ಹಲವು ಸಂಸದರು ವೈಯಕ್ತಿಕ ಮತ್ತು ಕೆಲಸಕ್ಕೆ ಸಂಬಂಧಿಸಿದಂತೆ ತಮ್ಮ ಗೈರುಹಾಜರಿಯ ಬಗ್ಗೆ ಮುಂಚಿತವಾಗಿ ತಿಳಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಬಿಜೆಪಿ ಮಿತ್ರ ಪಕ್ಷಗಳ ನಾಲ್ಕೈದು ಸಂಸದರೂ ಕೂಡ ಮತದಾನದ ವೇಳೆ ಹಾಜರಿರಲಿಲ್ಲ. ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತದೆ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಇನ್ನು ನಿನ್ನೆ ಒಂದು ದೇಶ, ಒಂದು ಚುನಾವಣೆ ಮಸೂದೆಯನ್ನು ಮೇಘವಾಲ್ ಅವರು ಮತಗಳ ವಿಭಜನೆಯ ನಂತರ ಲೋಕಸಭೆಯಲ್ಲಿ ಮಂಡಿಸಿದರು.