ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿಂದು (ಸೋಮವಾರ, ಜೂನ್.17) ಕಾಂಚನಜುಂಗಾ ರೈಲು ಅಪಘಾತವಾಗಿದೆ. ರೈಲಿನಲ್ಲಿದ್ದ ಪ್ರಯಾಣಿಕರ ಪೈಕಿ 15 ಮಂದಿ ಮೃತರಾಗಿದ್ದು, 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಬೆಳಿಗ್ಗೆ ರಂಗಪಾನಿ ನಿಲ್ದಾಣದಿಂದ ಹೊರಟಿದ್ದ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು (ಟ್ರೈನ್ ಸಂಖ್ಯೆ 13174) ಸಿಗ್ನಲ್ ದೋಷದಿಂದಾಗಿ ರಾಣಿಪಾತ್ರಾ ಹಾಗೂ ಛತ್ತರ್ ಹಾಟ್ ನಿಲ್ದಾಣದ ನಡುವೆಯೇ ಬೆಳಿಗ್ಗೆ 5.30 ರಿಂದಲೇ ನಿಂತಿತ್ತು.
ಇದೇ ಮಾರ್ಗದಲ್ಲಿ ಗೂಡ್ಸ್ ಗಾಡಿಯೊಂದು ಹಿಂಬದಿಯಿಂದ ಬರುತ್ತಿದ್ದು, ಸಿಗ್ನಲ್ ದೋಷ ನೋಡಿಕೊಳ್ಳದೇ ಕಾಂಚನಜುಂಗಾ ರೈಲಿಗೆ ಅಪ್ಪಳಿಸಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಅಪಘಾತದಲ್ಲಿ 15 ಮಂದಿ ಮೃತರಾಗಿದ್ದು, ಇದರಲ್ಲಿ ಗೂಡ್ಸ್ ರೈಲು ಚಾಲಕನ ಸಾವು ಕೂಡಾ ಸಂಭವಿಸಿದೆ. ಕಾಂಚನಜುಂಗಾ ರೈಲು ಅಗರ್ತಲಾದಿಂದ ಸಿಯಾಲ್ಡ್‌ಗೆ ತೆರಳುವ ವೇಳೆ ಬೆಳಿಗ್ಗೆ 9 ಗಂಟೆ ಸಮಯದಲ್ಲಿ ಈ ಅಪಘಾತ ಸಂಭವಿಸಿರಬಹುದೆಂದು ಊಹಿಸಲಾಗಿದೆ.
ಇನ್ನು ಘಟನಾ ಸ್ಥಳಕ್ಕೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇತ್ತ ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ ಅವರು ಮೃತರ ಸಂಬಂಧಿಕರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ಪರಿಹಾರ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ಪರಿಹಾರ ಧನ ಘೋಷಿಸಿದ್ದಾರೆ.