Mysore
29
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಸಮಷ್ಟಿ ಕವಿಗೋಷ್ಠಿಯು ಭಾವೈಕ್ಯತೆ ಸಾಮರಸ್ಯ ಕಲ್ಪಿಸುವ ವೇದಿಕೆ: ಡಾ. ಎಚ್. ಎಸ್ ಶಿವಪ್ರಕಾಶ್ ಅಭಿಮತ

ಮೈಸೂರು: ದಸರಾ ಕವಿಗೋಷ್ಠಿಯ ಪಂಚ ಕಾವ್ಯೋತ್ಸವದ ನಾಲ್ಕನೇ ದಿನವಾದ ಮಂಗಳವಾರ ‘ಸಮಷ್ಟಿ ಕವಿಗೋಷ್ಠಿ’ ಈ ವರ್ಷದ ಹೊಸ ವೈಶಿಷ್ಟ್ಯವಾಗಿದ್ದು, ಸಮಷ್ಟಿ ಕವಿಗೋಷ್ಠಿಯು ಭಾವೈಕ್ಯತೆಯ ಸಾಮರಸ್ಯ ಕಲ್ಪಿಸುವ ವೇದಿಕೆಯಾಗಿದೆ ಎಂದು ಹಿರಿಯ ಸಾಹಿತಿಗಳಾದ ಡಾ.ಎಚ್.ಎಸ್ ಶಿವಪ್ರಕಾಶ್ ಹೇಳಿದರು.

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಲಾಗಿದ್ದ ಸಮಷ್ಟಿ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿ ಪ್ರಪ್ರಥಮವಾಗಿ ಸಮಷ್ಟಿ ಬಹುಭಾಷ ಕವಿಗೋಷ್ಠಿಯನ್ನು ಆಯೋಜಿಸಿರುವುದು ಬಹಳ ಸಂತೋಷವಾಗಿದೆ. ಕಾವ್ಯಕ್ಕೆ ಭಾಷೆ ಒಂದು ಮಾಧ್ಯಮವಷ್ಟೆ. ಸಂವೇದನೆ ಎಂಬುದು ಎಲ್ಲಾ ಭಾಷೆಗಳಲ್ಲಿಯೂ ಸಮಾನ. ಬಹುಭಾಷೆಯ ಈ ಸಮ್ಮಿಲನ ಉದ್ಯಾನವನದಲ್ಲಿ ಅಲಂಕರಿಸಿದ ಬಗೆಬಗೆಯ ಹೂಗಳಿದ್ದಂತೆ ಎಂದು ವರ್ಣಿಸಿದರು.

ಪ್ರಸ್ತುತ ದಿನಮಾನಗಳಲ್ಲಿ ಭಾಷೆ ಮತ್ತು ಭಾವೈಕ್ಯತೆಯ ಸಾಮರಸ್ಯ ಅಗತ್ಯವಿದ್ದು, ಇಂತಹ ಕಾರ್ಯಕ್ರಮಗಳಿಂದ ಸಾಮರಸ್ಯ ಸಾಧಿಸಬಹುದು. ಇಷ್ಟು ವರ್ಷದಲ್ಲಿ ನಡೆದ ದಸರಾ ಕವಿಗೋಷ್ಠಿಯಲ್ಲಿ ಈ ವರ್ಷದ ಸಮಷ್ಟಿ ಕವಿಗೋಷ್ಠಿ ಮಾದರಿಯಾಗಿದೆ. ಮುಂಬರುವ ದಸರಾ ಕವಿಗೋಷ್ಠಿಗೆ ಮೈಸೂರಿನಲ್ಲಿ ಜಾಗತಿಕವಾಗಿ ಈ ಕವಿಗೋಷ್ಠಿ ನಡೆಯಬೇಕು ಎಂದು ಸಲಹೆ ನೀಡಿದರು.

ಕವಿಗೋಷ್ಠಿಯಲ್ಲಿ ಅಕ್ಷತಾರಾಜ್ ಪೆರ್ಲ ಅವರು ತುಳು ಭಾಷೆಯಲ್ಲಿ, ಕವಿಗಳಾದ ಇಂದಿರನ್ ರಾಜೇಂದ್ರನ್ ಅವರು ತಮಿಳಿನಲ್ಲಿ ‘ಹೆಂಡತಿಗೊoದು ಪ್ರೇಮಪತ್ರ’ ಎಂಬ ಕವನ, ಡಾ. ಋಷಿಕೇಶ್ ಅವರು ಒಡಿಯಾ ಭಾಷೆಯಲ್ಲಿ ‘ವಿಸರ್ಜನೆ’ ಎಂಬ ಕಾವ್ಯ ವಾಚನವನ್ನು, ಆಂಗ್ಲ ಭಾಷೆಯಲ್ಲಿ ಕನಸು ನಾಗತಿಹಳ್ಳಿ ಅವರು ತನ್ನ 6 ವರ್ಷದ ಮಗಳ ಕುರಿತು ‘ಲೀಲಾ-ಜಾಲ’ ಶೀರ್ಷಿಕೆಯಡಿ ಕವನವನ್ನು ಪ್ರಸ್ತುತಪಡಿಸಿದರು.

ಕಮಲ ಎಂ.ಆರ್ ಅವರು ಕನ್ನಡ ಭಾಷೆಯಲ್ಲಿ ‘ನನ್ನದೇ ನಿಘಂಟು’ ಎಂಬ ಕಾವ್ಯ ವಾಚನವನ್ನು, ಕಿರಣ್ ಕುಮಾರ್ ಎನ್ ಅವರು ಮಣಿಪುರಿ ಭಾಷೆಯಲ್ಲಿ ‘ಸ್ನೇಹಿತನಿಗೆ ಒಂದು ಪತ್ರ’ ಎಂಬ ಕಾವ್ಯ ವಾಚನ, ಜೊಸ್ಸಿ ಎಡ್ವಿನ್ ಪಿಂಟೋ ಅವರು ಕೊಂಕಣಿ ಭಾಷೆಯಲ್ಲಿ ‘ನನ್ನೂರು’ ಎಂಬ ಕಾವ್ಯ ವಾಚನವನ್ನು, ಡಾ.ದೀಪಕ್ ಭಟ್ ಅವರು ಸಂಸ್ಕೃತ ಭಾಷೆಯಲ್ಲಿ ಮೈಸೂರಿನ ಕುರಿತು ಸ್ವಾಗತ ಗೀತೆಯನ್ನು, ಡಾ. ನೀಲಿಮಾ ಗುಂಡಿ ಅವರು ಮರಾಠಿ ಭಾಷೆಯಲ್ಲಿ ‘ಓ ಭೂಮಿ’ ಎಂಬ ಶೀರ್ಷಿಕೆಯ ಕಾವ್ಯ ವಾಚನವನ್ನು, ಮನಮೋಹನ್ ಸಿಂಗ್ ಅವರು ಡೋಗ್ರಿ ಭಾಷೆಯಲ್ಲಿ ‘ನನ್ನ ಹುಡುಗಿಯೇ ಕೇಳು’ ಎಂಬ ಕವಿತೆಯನ್ನು, ಹಾಗೂ ಮಧುಸ್ ಪೂವಯ್ಯ ಅವರು ಕೊಡವ ಭಾಷೆಯ ‘ವರವ ಪ್ರಿಯ’ ಎಂಬ ವಾಚನ, ಸೇರಿದಂತೆ 15 ಕ್ಕೂ ಹೆಚ್ಚು ಬಹುಭಾಷ ಕವಿಗಳು ಕವನವನ್ನು ಪ್ರಸ್ತುತ ಪಡಿಸಿದರು.

ಕವಿಗೋಷ್ಠಿಯಲ್ಲಿ ಮುಖ್ಯಮಂತ್ರಿಗಳ ಕಾರ್ಯದರ್ಶಿ ಶಿವಸ್ವಾಮಿ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಬಿ. ಜೆ. ವಿಜಯ್ ಕುಮಾರ್, ಕವಿಗೋಷ್ಠಿ ಉಪ ಸಮಿತಿ ಕಾರ್ಯಾಧ್ಯಕ್ಷರಾದ ಪ್ರೊ.ಎನ್.ಕೆ.ಲೋಲಾಕ್ಷಿ, ಉಪ ವಿಶೇಷಾಧಿಕಾರಿ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಕಾರ್ಯದರ್ಶಿ ಸಿ.ಕೃಷ್ಣ, ಅಧಿಕಾರೇತರ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತಿತರರು ಹಾಜರಿದ್ದರು.

Tags: