Mysore
27
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಮೈಸೂರು: ಪಾರಂಪರಿಕ ನಡಿಗೆಗೆ ಚಾಲನೆ

ಮೈಸೂರು: ನಗರದ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸುವ ಉದ್ದೇಶದಿಂದ ಪುರಾತತ್ವ ಮತ್ತು ಪರಂಪರೆ ಇಲಾಖೆ ದಸರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಪಾರಂಪರಿಕ ನಡಿಗೆಗೆ ಇಲಾಖೆಯ ಆಯುಕ್ತ ದೇವರಾಜು ಭಾನುವಾರ ಚಾಲನೆ ನೀಡಿದರು.

ಪಾರಂಪರಿಕ ನಡಿಗೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿದಂತೆ 350 ಕ್ಕೂ ಹೆಚ್ಚಿನ ಜನ ಭಾಗವಹಿಸಿದ್ದು, ಭಾಗವಹಿಸಿದಂತಹ ಸಾರ್ವಜನಿಕರಿಗೆ ನಗರದ ಪಾರಂಪರಿಕ ಕಟ್ಟಡಗಳ ಬಗ್ಗೆ ತಜ್ಞರು ಮಾಹಿತಿ ನೀಡಿದರು.

ಪಾರಂಪರಿಕ ನಡಿಗೆಯು ರಂಗಾಚಾರ್ಲು ಪುರಭವನದಿಂದ ಪ್ರಾರಂಭವಾಗಿ ಸಿಲ್ಕರ್ ಜೂಬಿಲಿ ಕ್ಲಾಕ್ ಟವರ್(ದೊಡ್ಡ ಗಡಿಯಾರು, ಮೇಸನ್ ಕ್ಲಬ್, ಹತ್ತನೆ ಚಾಮರಾಜ ಒಡೆಯರ್ ವತ್ತ ಅಂಬಾವಿಲಾಸ ಅರಮನೆ ನಾಲ್ಕನೇ ಕೃಷ್ಣರಾಜ ಒಡೆಯರ್ ವೃತ್ತ, ಚಿಕ್ಕ ಗಡಿಯಾರ, ದೇವರಾಜ ಮಾರುಕಟ್ಟೆ ಕೃಷ್ಣರಾಜೇಂದ್ರ ಆಸ್ಪತ್ರೆ ಮೈಸೂರು ಮೆಡಿಕಲ್ ಕಾಲೇಜು, ಸರ್ಕಾರಿ ಆಯುರ್ವೇದ ಕಾಲೇಜು ಚಾಮರಾಜೇಂದ್ರ ಟೆಕ್ನಿಕಲ್ ಇನ್ಸಿಟಿಟ್ಯೂಟ್ ಕಾವೇರಿ ಗಾಂಧಿ ವೃತ್ತ ಹಾದು ರಂಗಾಚಾರ್ಲು ಪುರಭವನ(ಟೌನ್ ಹಾಲ್) ಹತ್ತಿರ ಮುಕ್ತಾಯಗೊಂಡಿತು.

ಚಾಲನೆ ನೀಡಿ ಮಾತನಾಡಿದ ಪುರಾತತ್ವ ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಜು, ಸಾಂಸ್ಕೃತಿಕ ನಗರಿ ಎಂದೇ ಪ್ರಸಿದ್ಧಿ ಪಡೆದಿರುವ ನಮ್ಮ ಮೈಸೂರಿನಲ್ಲಿ ನಮ್ಮ ಹಿರಿಯರು ಕಷ್ಟ ಪಟ್ಟು ನಿರ್ಮಾಣ ಮಾಡಿರುವಂತಹ ಹಲವಾರು ಪಾರಂಪರಿಕ ಕಟ್ಟಡಗಳಿದ್ದು, ಅವುಗಳನ್ನು ಉಳಿಸಿ, ಸಂರಕ್ಷಿಸುವ ಕರ್ತವ್ಯ ಸರ್ಕಾರ ಮತ್ತು ಯುವಪೀಳಿಗೆಯದು ಎಂದು ಹೇಳಿದರು.

ಟಾಂಗ ಸವಾರಿ, ಬೈಕ್ ಸವಾರಿ ಹಾಗೂ ಪಾರಂಪರಿಕ ನಡಿಗೆಯಿಂದ ಪರಂಪರೆಯನ್ನು ಉಳಿಸಲಾಗುವುದಿಲ್ಲ. ಈ ನಡಿಗೆಗಳು ಹಾಗೂ ಸವಾರಿಗಳು ಯುವಜನರಲ್ಲಿ ಅರಿವನ್ನು ಮೂಡಿಸಲು ಆಯೋಜಿಸುವ ಒಂದು ಕಾರ್ಯಕ್ರಮ ಇದರಲ್ಲಿ ತಿಳಿದುಕೊಂಡಂತಹ ಅಂಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರೂ ಪಾರಂಪರಿಕ ಕಟ್ಟಡಗಳು, ನಮ್ಮ ಪರಂಪರೆ ಹಾಗೂ ಸಂಸ್ಕೃತಿಯನ್ನು ಉಳಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಸಂರಕ್ಷಣೆಯಾಗಿಲ್ಲದ ಹಲವಾರು ಕಟ್ಟಡ ಹಾಗೂ ವಾಸ್ತು ಶಿಲ್ಪಗಳಿವೆ. ಇದರ ಬಗ್ಗೆ ಎಷ್ಟೋ ಜನರಿಗೆ ಮಾಹಿತಿಯೇ ಇರುವುದಿಲ್ಲ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸಲು ಇಲಾಖೆಯ ವತಿಯಿಂದ ಹಲವಾರು ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಅದರಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ನಮ್ಮೊಂದಿಗೆ ಕೈ ಜೋಡಿಸಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಚಾಮರಾಜನರ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಗಂಗಾಧರ್ ಮಾತನಾಡಿ, ಪ್ರಪಂಚದ ಯಾವುದೇ ಸ್ಥಳಕ್ಕೆ ಹೋದರು ಮೈಸೂರು ಎಂದಾಕ್ಷಣ ನೆನಪಾಗುವುದೇ ಇಲ್ಲಿನ ಅರಮನೆ ಮತ್ತು ಪಾರಂಪರಿಕ ಕಟ್ಟಡಗಳು. ಅಂತಹ ವಿಶ್ವ ವಿಖ್ಯಾತ ಪರಂಪರೆ, ಸಂಸ್ಕೃತಿಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಈ ಹಿನ್ನೆಲೆ ಯುವ ಜನರಲ್ಲಿ ಅರಿವನ್ನು ಮೂಡಿಸಲು ಅವರಿಗೆ ಪರಂಪರೆಯ ಮಹತ್ವವನ್ನು ತಿಳಿಸಲು ಇಂದು ಪಾರಂಪರಿಕ ನಡಿಗೆಯನ್ನು ಆಯೋಜಿಸಲಾಗಿದ್ದು, ಇಲ್ಲಿ ಕಲಿತಂತಹ ವಿಷಯಗಳನ್ನು ಇತರರೊಂದಿಗೆ ಹಂಚಿಕೊಂಡು ಅವರಲ್ಲಿಯೂ ಪರಂಪರೆ ಸಂಸ್ಕೃತಿ ಪಾರಂಪರಿಕ ಕಟ್ಟಡಗಳ ಬಗ್ಗೆ ಅವುಗಳ ಉಳಿವು ಹಾಗೂ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ನಮ್ಮ ಹಿರಿಯರಾದ ಮೈಸೂರು ಸಂಸ್ಥಾನದ ರಾಜರು ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಇದರ ಪ್ರತಿರೂಪವಾಗಿ ಇಂದು ಮೈಸೂರಿನಲ್ಲಿ ಹಲವಾರು ವಿಶಿಷ್ಟ ಮತ್ತು ಸುಂದರ ಕಟ್ಟಡಗಲಿವೆ ಅದರ ಬಗ್ಗೆ ಯಾರಿಗೂ ತಿಳಿದಿಲ್ಲ. ಜಗನ್ಮೋಹನ ಅರಮನೆ, ಮೈಸೂರು ಮೆಡಿಕಲ್ ಕಾಲೇಜು, ಕೆ ಆರ್ ಹಾಸ್ಪಿಟಲ್ ಸೇರಿದಂತೆ ಹಲವಾರು ಕಟ್ಟಡಗಲಿವೆ ಅವುಗಳನ್ನು ಉಳಿಸಿಕೊಂಡಿ ಹೋಗಬೇಕು ಇದರ ಬಗ್ಗೆ ಯುವ ಪೀಳಿಗೆಗಳಿಗೆ ಮಾಹಿತಿ ಕೊಡಬೇಕು. ಹಾಗೆ ಯುವ ಪೀಳಿಗೆಯ ಮಾಹಿತಿ ಪಡೆಯಲು ಆಸಕ್ತಿವಹಿಸಿ ತಾವೇ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಸಂಗೀತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ನಾಗೇಶ್ ಬೆಟ್ಟಕೋಟೆ ಮಾತನಾಡಿ, ವಿಶ್ವಕ್ಕೆ ಪಾರಂಪರಿಕ ಜ್ಞಾನವನ್ನು ತಂದುಕೊಟ್ಟತಹ ನಾಡು ನಮ್ಮ ಮೈಸೂರು. ಹೀಗಿದ್ದಾಗ ಅವುಗಳನ್ನು ಉಳಿಸುವುದು ಬೆಳೆಸುವುದು ನಮ್ಮ ಕರ್ತವ್ಯವಾಗಿರುತ್ತದೆ. ಹೀಗಾಗಿ, ಯುವ ಜನರು ಸ್ವಯಂ ಪ್ರೇರಿತರಾಗಿ ಪಾರಂಪರಿಕ ಕಟ್ಟಡಗಳ ಮಾಹಿತಿ ತಿಳಿದುಕೊಳ್ಳಲು ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ನಮ್ಮಲ್ಲಿ ಕಲೆಗಳಿಗೆ, ಪಾರಂಪರಿಕ ಕಟ್ಟಡಕ್ಕೆ ಆದ್ಯತೆಯನ್ನು ತಂದುಕೊಟ್ಟದ್ದು ಮೈಸೂರಿನ ರಾಜ ಮನೆತನ, ಅಂತಹ ನಾಡಿನಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಪರಂಪರೆ ಎಂಬುದು ಅಳಿದು ಹೋಗಬಾರದು. ಇತಿಹಾಸದಲ್ಲಿ ಹೇಳಿರುವಂತೆ ಕಲೆಯನ್ನು ಮರೆತರೆ ನಮ್ಮನ್ನು ನಾವೇ ಮರೆತಂತೆ ಅದನ್ನು ಉಳಿಸುವ ಕೆಲಸದ ಸರ್ಕಾರದ ಜೊತೆಗೆ ಯುವ ಪೀಳಿಗೆಯದ್ದಾಗಿದೆ ಎಂದರು.

ಯುವಜನತೆ ಬೇರೆಯದನ್ನು ಯೋಚಿಸುವ ಮೊದಲು ನಮ್ಮ ಕಲೆ ಹಾಗೂ ಪರಂಪರೆಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಸಾಂಸ್ಕೃತಿಕ ನಗರಿಯಲ್ಲಿ ಜನಿಸಿದಂತಹ ಪ್ರತಿಯೊಬ್ಬರು ಇಲ್ಲಿನ ಸಂಸ್ಕೃತಿ ಮತ್ತು ಪರಂಪರೆಗೆ ತಮ್ಮದೇ ಆದಂತಹ ಕೊಡುಗೆ ನೀಡಬೇಕು. ಹಾಗಿದ್ದಾಗ ಮಾತ್ರವೇ ದೇಶಕ್ಕೆ ರಾಜ್ಯಕ್ಕೆ ಒಬ್ಬ ಶ್ರೇಷ್ಠ ಪ್ರಜೆಯಾಗಲು ಸಾಧ್ಯ ಎಂದು ಹೇಳಿದರು.

ಪಾರಂಪರಿಕ ಕಟ್ಟಡಗಳ ವೀಕ್ಷಣೆ ಮತ್ತು ಮಾಹಿತಿಗಾಗಿ ವಿ ಆರ್ ಕಾರ್ಡ್

ಪುರಾತತ್ವ, ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ವತಿಯಿಂದ ಮೈಸೂರಿನಲ್ಲಿರುವ ಹಲವಾರು ಪಾರಂಪರಿಕ ಕಟ್ಟಡಗಳ ಬಗ್ಗೆ ಕುಳಿತಲ್ಲೇ ಮೊಬೈಲ್ ಮೂಲಕ ಮಾಹಿತಿ ತಿಳಿಯಲು ವಿ.ಆರ್ ಕಾರ್ಡ್ ಹೊರತರಲಾಗಿದ್ದು, ಕಾರ್ಡ್ ನ ಹಿಂಭಾಗದಲ್ಲಿರುವ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಆಪ್ ಡೌನ್ಲೋಡ್ ಆಗುತ್ತದೆ. ಆಪ್ ನಲ್ಲಿರುವ ಕಣ್ಣಿನ ಸಿಂಬಲ್ ಅನ್ನು ಸ್ಕ್ಯಾನ್ ಮಾಡಿದಾಗ ಮೈಸೂರು ವಿಶ್ವ ವಿದ್ಯಾನಿಲಯ, ಅರಮನೆ ಸೇರಿದಂತೆ ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳ ವೀಕ್ಷಣೆಯ ಜೊತೆಗೆ ಮಾಹಿತಿಯನ್ನು ಪಡೆಯಬಹುದಾಗಿದೆ. ಕಾರ್ಡ್ ನ ಬೆಲೆ 10 ರೂ. ಆಗಿದ್ದು, ಪುರಾತತ್ವ ಇಲಾಖೆಯಲ್ಲಿ ಪಡೆಯಬಹುದಾಗಿರುತ್ತದೆ.

Tags: