ಮೈಸೂರು: ರಾಜಕುಮಾರ ವೇಷ ಭೂಷಣ ತೊಟ್ಟ ಚಿಣ್ಣರು, ಚಾಮುಂಡಿ, ದುರ್ಗಿ ಹಾಡಿಗೆ ನೃತ್ಯ ಮಾಡಿ ಸಂಭ್ರಮಿಸಿದರು. ಹುಲಿ ಕುಣಿತ, ಗೊಂಬೆ ಕುಣಿತ, ಯಕ್ಷಗಾನ, ಜನಪದ ನೃತ್ಯ, ಕಂಸಾಳೆ, ಡೊಳ್ಳು ಕುಣಿತ, ಗಾಯನ ಹೀಗೆ ನಾನಾ ಕಲಾ ಪ್ರತಿಭೆಯನ್ನು ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು.
ಇದು… ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2024 ರ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ, ಮಕ್ಕಳ ದಸರಾ ಕಲಾಥಾನ್ ನಲ್ಲಿ ಕಂಡು ಬಂದವು. ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಮಕ್ಕಳ ದಸರಾಗೆ ಅದ್ದೂರಿಯಾಗಿ ಚಾಲನೆ ನೀಡಿದರು.
ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ದೇವರಾಜ ಅರಸು ರಸ್ತೆ ಮಾರ್ಗವಾಗಿ ಮಹಾರಾಜ ಸರ್ಕಾರಿ ಪ್ರೌಢಶಾಲೆವರೆಗೆ, ಮಕ್ಕಳಿಗಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳು ವಿವಿಧ ಬಗೆಯ ಸಾಂಸ್ಕೃತಿಕ, ಜಾನಪದ, ಮಹನೀಯರ ವೇಷ ಭೂಷಣ ತೊಟ್ಟು ಗಾಂಭೀರ್ಯದಿಂದ ಹೆಜ್ಜೆ ಹಾಕಿದರು.
ಶಾಲಾ ಮಕ್ಕಳು ನಾಡಿನ ಕಲೆ ಸಂಸ್ಕೃತಿ ಸಾರುವ ವೇಶ ಭೂಷಣಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.
ಮಕ್ಕಳ ದಸರಾ ಕಾರ್ಯಕ್ರಮಕ್ಕೆ ಸರ್ಕಾರಿ ಪ್ರಾಥಮಿಕ ಶಾಲೆ ಶಿವರಾಂಪುರ, ಪ್ರೌಢಶಾಲೆ ಕೆ.ಆರ್. ನಗರ, ಸೇಂಟ್ ಜೋಸೆಫ್ ಹುಣಸೂರು, ಸರ್ಕಾರಿ ಪ್ರೌಢಶಾಲೆ ಮೈಸೂರು ಉತ್ತರ ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಸ್ವರ್ಧೆಯಲ್ಲಿ ಭಾಗವಹಿಸಲು ಮಕ್ಕಳು ಆಗಮಿಸಿದ್ದರು.