Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಕನ್ನಡ ನಾಡು ನುಡಿ ಸಂರಕ್ಷಣೆ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ : ಹಂಪ ನಾಗರಾಜಯ್ಯ

ಮೈಸೂರು: ಕನ್ನಡ ನಾಡು ನುಡಿಯ ಸಂರಕ್ಷಣೆ ಮಾಡುವ ಕಲಿಗಳನ್ನು ಅಪರಾಧಿಗಳಂತೆ ಕಾಣದೆ ಅವರನ್ನು ಪ್ರೋತ್ಸಾಹಿಸಬೇಕು. ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ ಯುವ ಜನತೆಗೆ ಉದ್ಯೋಗ ನೀಡಬೇಕು ಎಂದು ಹಿರಿಯ ಸಾಹಿತಿಗಳಾದ ನಾಡೋಜ ಹಂಪ ನಾಗರಾಜಯ್ಯ ಅವರು ತಿಳಿಸಿದರು.

ಇಂದು ಚಾಮುಂಡಿ ಬೆಟ್ಟದ ಆವರಣದಲ್ಲಿ ದಸರಾ ಮಹೋತ್ಸವ 2024ನ್ನು ತಾಯಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಸೆಪ್ಟೆಂಬರ್ 15 ಬೀದರ್‌ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ಏರ್ಪಡಿಸಿದ್ದು, ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಪ್ರಯತ್ನ ಎಂದು ತಿಳಿಸಿ ಉದ್ಘಾಟನಾ ಭಾಷಣ ಮಾಡಿದರು.

ಸಿಎಂ ಸಿದ್ದರಾಮಯ್ಯ ಮಾತನಾಡಿ, ನಾಡಿನ ಜನತೆಗೆ ದಸರಾ ಮಹೋತ್ಸವದ ಶುಭಾಶಯಗಳು. ಈ ವರ್ಷ ಉತ್ತಮವಾಗಿ ಮಳೆ ಆಗಿದೆ. ಎಲ್ಲಾ ಜಲಾಶಯಗಳು ತುಂಬಿವೆ. ಮಳೆ ಬೆಳೆ ಆದರೆ ಮಾತ್ರ ಜನರು ಸಮೃದ್ಧಿಯನ್ನು ಕಂಡು ಸುಖ ಶಾಂತಿ ನೆಮ್ಮದಿಯಿಂದ ಬದುಕಲು ಸಾಧ್ಯ. ಈ ವರ್ಷ ಮುಂಗಾರು ಬಿತ್ತನೆ 99% ಆಗಿದೆ. ಇನ್ನೂ ಹೆಚ್ಚು ಮಳೆ ಬೆಳೆ ಆಗಿ ಉತ್ಪಾದನೆ ಆಗಲಿ ಎಂದು ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.

ಮೈಸೂರು ದಸರಾ ನಾಡಹಬ್ಬ. ಇದು ಜನರ ದಸರಾ. ಹೆಚ್ಚು ಜನ ಇದರಲ್ಲಿ ಭಾಗವಹಿಸಬೇಕು. 9 ದಿನಗಳ ಕಾಲ ನವರಾತ್ರಿ ನಡೆಯುತ್ತದೆ. 18 ನೆಯ ದಿನ ವಿಜಯದಶಮಿ ನಡೆಯುತ್ತದೆ ಎಂದು ತಿಳಿಸಿದರು.

ಇಂದು ನಾಡೋಜ ಹಂಪ ನಾಗರಾಜಯ್ಯ ಅವರು ದಸರಾ ಉದ್ಘಾಟನೆ ಮಾಡಿದ್ದಾರೆ. ಅವರಿಗೆ 88 ವರ್ಷ. ಈ ಮೊದಲೇ ಇವರಿಗೆ ಅವಕಾಶ ದೊರೆಯಬೇಕಿತ್ತು. ಅವರ ಪತ್ನಿ ಕಮಲಾ ಹಂಪನಾ ಅವರು ಸಾಹಿತಿಗಳಾಗಿದ್ದರು. ಆದರೆ ಅವರು ಇತ್ತೀಚೆಗೆ ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿಸಿದರು.

ಜನರಿಂದ ಆಯ್ಕೆಯಾದ ಚುನಾಯಿತ ಸರ್ಕಾರವನ್ನು ಯಾರು ಅಸ್ಥಿರಗೊಳಿಸಬಾರದು. ನಮಗೆ ಜನರು ಅಭಿವೃದ್ಧಿ ಮಾಡಲು 5 ವರ್ಷ ಅಧಿಕಾರ ನೀಡಿದ್ದಾರೆ. ಸತ್ಯಕ್ಕೆ ಯಾವಾಗಲೂ ಜಯ ದೊರೆಯುತ್ತದೆ. ಜನರ ಆಶೀರ್ವಾದ, ತಾಯಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಇರುವವರೆಗೆ ಯಾರು ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ. ನಾನು ಇಲ್ಲಿಯವರೆಗೆ 9 ಚುನಾವಣೆಗಳಲ್ಲಿ ಗೆದ್ದಿದ್ದೇನೆ. 1984ರಲ್ಲಿ ನಾನು ಮಂತ್ರಿಯಾದೆ. ಮೊದಲ ಬಾರಿ ಮಂತ್ರಿಯಾಗಿ 40 ವರ್ಷ ಆಗಿದೆ. ನಾವು ಅಧಿಕಾರಕ್ಕೆ ಬರುವ ಮುಂಚೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ್ದು, ಅಧಿಕಾರಕ್ಕೆ ಬಂದ ನಂತರ 5 ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಪ್ರತಿ ಕುಟುಂಬಕ್ಕೆ ವಾರ್ಷಿಕ 40 ರಿಂದ 50 ಸಾವಿರ ಸೌಲಭ್ಯ ದೊರೆಯುತ್ತಿದೆ. 1.21 ಕೋಟಿ ಕುಟುಂಬ ಗೃಹಲಕ್ಷ್ಮಿ, 1.6 ಕೋಟಿ ಕುಟುಂಬ ಗೃಹಜ್ಯೋತಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ. 1.86 ಲಕ್ಷ ಯುವಕರು ಯುವನಿಧಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಬಿಪಿಎಲ್ ಕುಟುಂಬಗಳ ಸದಸ್ಯರಿಗೆ 5 ಕೆಜಿ ಅಕ್ಕಿ ಹಾಗೂ 5 ಕೆಜಿ ಅಕ್ಕಿಗೆ ಹಣ ನೀಡಲಾಗುತ್ತಿದೆ. ರಾಜ್ಯದ ಪ್ರತಿಯೊಬ್ಬ ಮಹಿಳೆಯು ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ಕಳೆದ ವರ್ಷ ಬರಗಾಲ ಇತ್ತು. ಕಳೆದ ಬಾರಿ ಉದ್ಘಾಟನಾ ಸಮಾರಂಭದಲ್ಲಿ ಮುಂದಿನ ವರ್ಷ ಉತ್ತಮ ಮಳೆ ಆಗಲಿ ಎಂದು ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದೆವು. ದೇವಿಯ ಆಶೀರ್ವಾದದಿಂದ ಈ ಬಾರಿ ಉತ್ತಮ ಮಳೆಯಾಗಿದೆ. ಆದ್ದರಿಂದ ಅದ್ದೂರಿ ದಸರಾ ಆಚರಣೆ ಮಾಡಲಾಗುತ್ತಿದೆ. ನಾವು ಎಲ್ಲರೂ ನೆಮ್ಮದಿಯಿಂದ ಬದುಕಲು ನಾಡ ದೇವಿ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸುತ್ತೇವೆ ಎಂದರು.

ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ನೀಡುತ್ತಿದ್ದೇವೆ. ಒಂಬತ್ತು ದಿನಗಳ ಕಾಲ ವಿವಿಧ ಪೂಜೆಗಳನ್ನು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಹೆಣ್ಣು ಕುಟುಂಬದ ಕಣ್ಣು. ದೇವಿ ಎಲ್ಲರಿಗೂ ಸನ್ಮಾರ್ಗವನ್ನು ಉಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್‌.ಸಿ.ಮಹದೇವಪ್ಪ ಅವರು ಮಾತನಾಡಿ, ಇಂದು ಒಂಬತ್ತು ದಿನಗಳ ನವರಾತ್ರಿಯ ಹಬ್ಬ ಪ್ರಾರಂಭವಾಗಿದೆ. ನಮ್ಮ ಆಚಾರ ವಿಚಾರ ಧರ್ಮ ಉಪಾಸನೆ ಮಾಡಲು ಸಂವಿಧಾನ ಮುಕ್ತ ಅವಕಾಶ ನೀಡಿದೆ. ಜನರು ಸಂವಿಧಾನಬದ್ಧವಾಗಿ ಹಕ್ಕುಗಳನ್ನು ಅನುಭವಿಸಲು ಜಾಗೃತಿ ನೀಡಲು ಸಂವಿಧಾನ ಜಾಗೃತಿ ಜಾಥಾ ನಡೆಸಲಾಯಿತು. ಸೆಪ್ಟೆಂಬರ್.15ರಂದು ಸಂವಿಧಾನ ರಕ್ಷಣೆ ಬಗ್ಗೆ ತಿಳಿಸಲು ಬೀದರ್‌ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ನಿರ್ಮಿಸಿ ಇದರಲ್ಲಿ 30 ಲಕ್ಷ ಜನರು ಭಾಗವಹಿಸಿದ್ದರು. ನಮ್ಮ ಸರ್ಕಾರ 5 ಗ್ಯಾರಂಟಿಗಳನ್ನು ನೀಡಿ ಜನರ ಜೀವನ ಸುಧಾರಣೆ ಮಾಡಲು ಸರ್ವ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ಅವರು ಮಾತನಾಡಿ, ಮೊದಲು ಮೈಸೂರು ರಾಜ್ಯ ಆಗಿತ್ತು. ಮೈಸೂರು ಅರಸರು ಮೈಸೂರು ದಸರಾ ಆಚರಣೆಯನ್ನು ಜಾರಿಗೆ ತಂದರು. ದಸರಾ ಮಹೋತ್ಸವದಲ್ಲಿ 9 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. 21 ದಿನಗಳ ಕಾಲ ವಿದ್ಯುತ್ ದೀಪಾಲಂಕಾರ ನಡೆಯುತ್ತದೆ. ವಿಶ್ವದ ಮೂಲೆ ಮೂಲೆಯಿಂದ ಜನರು ಆಗಮಿಸುತ್ತಾರೆ. ಮೈಸೂರು ಅಭಿವೃದ್ಧಿಗೆ ಸಮಿತಿಯನ್ನು ರಚಿಸಿ ಯೋಜನೆಯನ್ನು ರೂಪಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಹಾಗೂ ರೇಷ್ಮೆ ಇಲಾಖೆಯ ಸಚಿವ ಕೆ ವೆಂಕಟೇಶ್, ಕಾನೂನು ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ಪ್ರವಾಸೋಧ್ಯಮ ಇಲಾಖೆಯ ಸಚಿವರಾದ ಹೆಚ್ ಕೆ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಚಿವರಾದ ಕೆ ಹೆಚ್ ಮುನಿಯಪ್ಪ, ಅರಣ್ಯ ಮತ್ತು ವಸತಿ ವಿಹಾರಧಾಮಗಳ ಅಧ್ಯಕ್ಷರು ಹಾಗೂ ಹೆಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿಲ್ ಚಿಕ್ಕಮಾದು, ಚೆಸ್ಕಾಂ ಅಧ್ಯಕ್ಷರು ಹಾಗೂ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್, ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಪುಷ್ಪ ಅಮರನಾಥ್, ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ ರವಿಶಂಕರ್, ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ ಡಿ ಹರೀಶ್ ಗೌಡ, ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್, ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಗೌಡ, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀವತ್ಸ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಆರ್ ಕೃಷ್ಣಮೂರ್ತಿ, ವಿಧಾನಪರಿಷತ್ ಶಾಸಕರಾದ ಡಿ ತಿಮ್ಮಯ್ಯ, ಸಿ ಎನ್ ಮಂಜೇಗೌಡ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್, ಮೂಡಾ ಅಧ್ಯಕ್ಷರಾದ ಕೆ ಮರಿಗೌಡ, ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

 

Tags: