Mysore
24
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಆಚರಣೆ ಇರಲಿ, ಮೂಢನಂಬಿಕೆ ಬೇಡ: ಮಹಿಳೆಯರಿಗೆ ಮಹದೇವಪ್ಪ ಸಲಹೆ

ಮೈಸೂರು: ಮಹಿಳೆಯರು ಮೂಢನಂಬಿಕೆಗೆ ಒಳಗಾಗದೆ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಹಿಳೆಯರಿಗೆ ಸಲಹೆ ನೀಡಿದರು.

ಇಂದು ನಾಡಹಬ್ಬ ದಸರಾ ಅಂಗವಾಗಿ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ನಗರದ ಜೆ.ಕೆ ಗ್ರೌಂಡ್ಸ್ನಲ್ಲಿ ಆಯೋಜಿಸಲಾಗಿದ್ದ, ಮಹಿಳಾ ದಸರಾವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿ ಮಹಿಳಾ ಹಬ್ಬಕ್ಕೆ ಕಳೆ ತಂದಿರುವುದು ಸಂತಸವಾಗಿದೆ. ಮಹಿಳೆಯರು ಯಾರ ಮೇಲೂ ಅವಲಂಬಿತರಾಗದೆ ಸರ್ಕಾರದ ಯೋಜನೆಗಳು ಹಾಗೂ ಕಡ್ಡಾಯ ಶಿಕ್ಷಣದ ಮೂಲಕ ಸ್ವಾವಲಂಬಿಯಾಗಿ ಬದುಕು ನಡೆಸುವಲ್ಲಿ ಸಫಲರಾಗಬೇಕು ಎಂದರು.

ಜಗತ್ತಿನಲ್ಲಿ ಅತೀ ಹೆಚ್ಚು ಮೂಢನಂಬಿಕೆಗೆ ಒಳಗಾಗುತ್ತಿರುವವರೇ ಹೆಣ್ಣು ಮಕ್ಕಳು. ಹೀಗಾಗಿ, ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ ಗಟ್ಟಿಯಾಗಿ, ಮೂಢನಂಬಿಕೆಯ ಕಟ್ಟುಪಾಡಿನಿಂದ ಹೊರಬರಬೇಕು ಎಂದು ಹೇಳಿದರು.

ಸ್ವಾವಲಂಬನೆ ಜೀವನ ನಡೆಸುವ ಅನೇಕ ಮಹಿಳೆಯರು ಇಂದು ಕರಕುಶಲ ಪ್ರದರ್ಶನ ಮತ್ತು ಅಳಿವಿನ ಅಂಚಿನಲ್ಲಿರುವ ಗುಡಿ ಕೈಗಾರಿಕೆಗಳ ಉಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅಂತಹವರ ಜೀವನ ಸುಖಕರವಾಗಿ ಸಾಗಬೇಕು. ಮೂಢನಂಬಿಕೆಯನ್ನು ಅನುಸರಿಸುವಲ್ಲಿ ಮಹಿಳೆಯರೇ ಹೆಚ್ಚಾಗಿರುವುದರಿಂದ ಇಂದು ಮೂಢನಂಬಿಕೆಯ ಹೆಸರಿನಲ್ಲಿ ಎಷ್ಟೋ ಹೆಣ್ಣುಮಕ್ಕಳು ಶೋಷಣೆಗೆ ಒಳಗಾಗುತ್ತಿದ್ದಾರೆ. ಮೂಢನಂಬಿಕೆಯಿಂದ ಹೊರಬರಲು ಮೊದಲು ಸುಶಿಕ್ಷಿತರಾಗಿ ವೈಜ್ಞಾನಿಕವಾಗಿ ವಿಚಾರಣೆ, ಚಿಂತನೆ ನಡೆಸಬೇಕು ಎಂದು ತಿಳಿಸಿದರು.

ಮೂಢನಂಬಿಕೆಗೆ ಹೆಣ್ಣುಮಕ್ಕಳು ಬಲಿಯಾಗಬಾರದೆಂದರೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಹಿಂದೂ ಬಿಲ್‌ಕೋಡ್ ಬಗ್ಗೆ ತಿಳಿದುಕೊಳ್ಳಬೇಕು. ಮಹಿಳೆಯರು ಮಾಟ-ಮಂತ್ರ, ಯಂತ್ರ-ತoತ್ರ, ಶಾಸ್ತ್ರಗಳ ಮೊರೆ ಹೋಗುವುದನ್ನು ಬಿಟ್ಟು, ಸಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಮುಂದೆ ಬಂದು ಸ್ವಾವಲಂಬನೆ ಜೀವನ ನಡೆಸಬೇಕು ಎಂದರು.

ಮಹಿಳೆಯರ ಶಿಕ್ಷಣಕ್ಕಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ. 17ನೇ ಶತಮಾನದಲ್ಲಿ ಬಸವಣ್ಣನವರು ಲಿಂಗ ತಾರತಮ್ಯದ ವಿರುದ್ಧ ಹೋರಾಡಿ ಸ್ವಂತ ಮನೆ ಬಿಟ್ಟು ಹೊರ ನಡೆದ ರೀತಿಯಾಗಿ, ಮಹಿಳೆಯರ ಸಮಾನತೆಗಾಗಿ ತಮ್ಮ ಕಾನೂನು ಮಂತ್ರಿ ಪದವಿಯನ್ನೇ ತ್ಯಾಗ ಮಾಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಈ ಸಮಯದಲ್ಲಿ ನೆನೆಯಬೇಕು ಎಂದು ಹೇಳಿದರು. ಬಳಿಕ ವಸ್ತು ಪ್ರದರ್ಶನ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಮಹಿಳೆಯರಿಗೆ ಶುಭಾಶಯ ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಉಪಾಧ್ಯಕ್ಷೆ ಡಾ. ಪುಷ್ಪ ಅಮರ್ನಾಥ್ ಮಾತನಾಡಿ, ಕರ್ನಾಟಕದಲ್ಲಿ ಮಹಿಳೆಯರಿಗೆ ವಿಶೇಷವಾದ ಶಕ್ತಿಯಿದ್ದು, ಈ ಬಾರಿ ಸುಭದ್ರಾ ಸರ್ಕಾರದಲ್ಲಿ ನವರಾತ್ರಿಯನ್ನು ಆಚರಿಸುತ್ತಿದ್ದೇವೆ. ಮಹಿಳೆ ಮನಸ್ಸು ಮಾಡಿದರೆ ಏನನ್ನಾದರು ಸಾಧಿಸಬಹುದು. ಇಂದು ನಾನಾ ಕ್ಷೇತ್ರದಲ್ಲಿ ಮಹಿಳೆಯರು ಕಾರ್ಯ ನಿರ್ವಹಿಸುತ್ತಿರುವುದನ್ನು ನೋಡಬಹುದು. ನಮ್ಮ ಸರ್ಕಾರ ಮಹಿಳೆಯರ ಏಳಿಗೆಯನ್ನು ಬಯಸುವ ಸರ್ಕಾರವಾಗಿದ್ದು, ಈ ದೃಷ್ಟಿಯಲ್ಲಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿರುವ ಮೂಲಕ ಮಹಿಳೆಯರ ಸ್ವಾವಲಂಬನೆ ಜೀವನಕ್ಕೆ ದಾರಿ ತೋರಿಸಿದೆ ಎಂದರು.

ಇಂದು ನಾರಿಶಕ್ತಿ, ಗಂಡಿಗಿಂತಲೂ ಒಂದು ಹೆಜ್ಜೆ ಮುಂದೆ ಇದ್ದಾರೆ. ಮೊದಲು ಮನುಷ್ಯ ನಂತರ ಧರ್ಮ. ಧರ್ಮದ ಹೆಸರಿನಲ್ಲಿ ಮಹಿಳೆಯರು ಮೂಢನಂಬಿಕೆಗೆ ಒಳಗಾಗಬಾರದು. ಕುಟುಂಬ ಮತ್ತು ಸಮಾಜವನ್ನು ಸರಿ ದಾರಿಯಲ್ಲಿ ಸಾಮಾಜಿಕ ಅಂಶಗಳಾದ ಆರ್ಥಿಕ, ಶೈಕ್ಷಣಿಕ ಆರೋಗ್ಯ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಮುಂದೆ ಬಂದು ಸರ್ವತೋಮುಖ ಅಭಿವೃದ್ಧಿಯತ್ತ ಮುಖ ಮಾಡಬೇಕು ಎಂದರು.

ರಾಜ್ಯ ಮಹಿಳಾ ಅಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌದರಿ ಮಾತನಾಡಿ, ಮೌಢ್ಯ ಅಂಧಕಾರವನ್ನು ತೊಲಗಿಸುವಲ್ಲಿ ಮಹಿಳೆಯರು ಬದಲಾಗಬೇಕು. ಅಂಬೇಡ್ಕರ್ ಅವರ ಆಶಯದಂತೆ ಮಹಿಳೆಯರು ಶಿಕ್ಷಣ, ಸಂಘಟನೆ ಹೋರಾಟದ ಮಂತ್ರಗಳನ್ನು ಮೈ ಗೂಡಿಸಿಕೊಳ್ಳಬೇಕು. ಮಹಿಳೆಯರಿಗೆ ಶಿಕ್ಷಣದ ಅವಶ್ಯಕತೆ ಇದೆ. ನಮ್ಮ ಹಕ್ಕುಗಳನ್ನು ನಾವು ಪಡೆದುಕೊಳ್ಳಬೇಕು. ಹೆಣ್ಣಿನ ಸ್ವರೂಪವೇ ದಸರಾ. ಹೆಣ್ಣು ಅಂದರೆ ಶಕ್ತಿ, ಶಾಂತಿ, ನೆಮ್ಮದಿ, ಸಹನಾ ಶೀಲತೆ, ಸಮೃದ್ಧಿಯ ಅಪ್ರತಿರೂಪ ಎಂದರು.

ಈ ಬಾರಿ ವಿಶೇಷವಾಗಿ ಮೇಳದಲ್ಲಿ ಚಾಮುಂಡೇಶ್ವರಿ ಒಕ್ಕೂಟ, ಸಿರಿಧಾನ್ಯ ಮಾರಾಟ ಕೇಂದ್ರ, ಕೊಲ್ಲಾಪುರದಮ್ಮ ಸ್ತ್ರೀಶಕ್ತಿ ಸ್ವಹಾಯ ಸಂಘ, ಅನ್ನಪೂರ್ಣೇಶ್ವರಿ ಸ್ತ್ರೀಶಕ್ತಿ ಕೇಂದ್ರ ಸೇರಿದಂತೆ 30 ಕ್ಕೂ ಹೆಚ್ಚು ಮಳಿಗೆಗಳು ಇವೆ. ಸೀರೆ ಮಾರಾಟ, ಮಹಿಳಾ ಆಭರಣಗಳು, ಚುರುಮುರಿ, ತಿಂಡಿತಿನಿಸುಗಳು, ಬಟ್ಟೆ, ಹೊಸ ಪ್ರಾಡೆಕ್ಟ್, ಪೇಂಟಿoಗ್ಸ್ ಸೇರಿದಂತೆ ಸ್ತ್ರೀ ಸ್ವಾವಲಂಬನೆ ಸಾರುವ ಮಳಿಗೆಗಳನ್ನು ಸ್ಥಾಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಉಪಾಸಮಿತಿಯ ವಿಶೇಷಧಿಕಾರಿಗಳಾದ ಪ್ರಿಯದರ್ಶಿನಿ, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಸಮಿತಿಯ ಸದಸ್ಯರು ಸೇರಿದಂತೆ ಅನೇಕ ಮಹಿಳೆಯರು ಉಪಸ್ಥಿತರಿದ್ದರು.

Tags: