ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಸಿಎಂ ಸಿದ್ದರಾಮಯ್ಯ ಅವರು ಸತತ 7ನೇ ಬಾರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ದಾಖಲೆ ಬರೆದಿದ್ದಾರೆ.
ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಪ್ರಾರಂಭವಾಗಿ 414 ವರ್ಷಗಳು ಕಳೆದಿವೆ. ಇಷ್ಟು ವರ್ಷಗಳಲ್ಲಿ ಪ್ರಥಮ ಬಾರಿಗೆ ಹಾಗೂ ಸತತ 7 ಬಾರಿ ಸಿದ್ದರಾಮಯ್ಯ ಅವರು, ಜಂಬೂಸವಾರಿಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿದ ಮೊದಲ ಮುಖ್ಯಮಂತ್ರಿಯಾಗಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು 2014 ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅರ್ಜುನ ಆನೆ ಜಂಬೂಸವಾರಿಯಲ್ಲಿ 750 ಕೆ.ಜಿ.ಯ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಿತ್ತು. ಆ ನಂತರ 2023 ಮತ್ತು ಈ ಬಾರಿ ಅಭಿಮನ್ಯು ಆನೆ ಅದ್ದೂರಿಯಾಗಿ ಗಜ ಗಾಂಭೀರ್ಯದಿಂದ ಅಂಬಾರಿ ಹೊತ್ತು ಬನ್ನಿಮಂಟಪದವರೆಗೆ ಸಾಗಿದೆ.
ಈ ವರ್ಷ ನಾಡದೇವಿ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಸಿ.ಮಹದೇವಪ್ಪ, ಶಿವರಾಜ್ ತಂಗಡಗಿ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಹಾಗೂ ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಸಿಎಂ ಸಿದ್ದರಾಮಯ್ಯರಿಗೆ ಸಾಥ್ ನೀಡಿದರು. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅನುಪಸ್ಥಿತಿಯಲ್ಲಿ ಪುಷ್ಪಾರ್ಚನೆ ಸಲ್ಲಿಸಲಾಯಿತು.