ಮೈಸೂರು: ಮಕ್ಕಳು ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ದಸರಾ ಮಹೋತ್ಸವದಲ್ಲಿ ಆಯೋಜಿಸಿರುವ ಮಕ್ಕಳ ದಸರಾ ಕಾರ್ಯಕ್ರಮವು ಉತ್ತಮ ವೇದಿಕೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶೈಕ್ಷಣಿಕ ವಸ್ತು ಪ್ರದರ್ಶನದಲ್ಲಿ ಸೋಮವಾರ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳ ದಸರಾವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ. ಮಕ್ಕಳು ಧರ್ಮ, ಜಾತಿ ಮೀರಿದ ನಿರ್ಮಲ ಮನಸ್ಸುಳ್ಳವರು. ಅವರಲ್ಲಿ ಸಾಂಸ್ಕೃತಿಕ ಅಭಿರುಚಿಯನ್ನು ಬೆಳೆಸಲು ಪೋಷಕರು ನೆರವಾಗಬೇಕು. ಶಿಕ್ಷಕರು ಕೂಡ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಅವರು ಪ್ರಬುದ್ಧ ನಾಗರಿಕರಾಗಿ ಜೀವಿಸಲು ಅತ್ಯುತ್ತಮ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಮಕ್ಕಳನ್ನು ಅತ್ಯಂತ ಎಚ್ಚರಿಕೆಯಿಂದ ಮುತುವರ್ಜಿವಹಿಸಿ ಬಾಲ್ಯದಲ್ಲಿ ಗುಣಾತ್ಮಕ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ನಡೆವಳಿಕೆಗಳನ್ನು ಕಲಿಸಬೇಕು. ನಮ್ಮ ದೇಶದ ಸಂವಿಧಾನದ ಆಶಯದಂತೆ ಮಕ್ಕಳು ಉತ್ತಮ ಪ್ರಜೆಗಳಾಗಬೇಕು ಎಂದು ಆಶಿಸಿದರು.
ಬಾಲಕ ಅಗಸ್ತ್ಯ ಮಾತನಾಡಿ, ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸಲು ಉತ್ತಮ ವೇದಿಕೆ ಇದಾಗಿದ್ದು, ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳಿಗೆ ಅಗತ್ಯವಾಗಿದೆ. ಮಕ್ಕಳು ಕೂಡ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಪ್ರತಿಭೆ ಪ್ರದರ್ಶಿಸಬೇಕು ಎಂದು ನುಡಿದರು.
ಇದೇ ವೇಳೆ ಕಲಾಮಂದಿರ ಆವರಣದಲ್ಲಿ ತೆರೆಯಲಾಗಿರುವ ಶೈಕ್ಷಣಿಕ ವಸ್ತುಪ್ರದರ್ಶನದ ಮಳಿಗೆಗಳನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಆಡಳಿತಾಧಿಕಾರಿ ಮಂಜುಬುದ್ದಿ, ವಿಭಾಗಧಿಕಾರಿ ರಮೇಶ್, ಡಿಡಿಪಿಐ ಜವರೇಗೌಡ, ಶಿಕ್ಷಣಾಧಿಕಾರಿ ಶೋಭಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.