ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಯುವ ದಸರಾ ಕಾರ್ಯಕ್ರಮದ ಸ್ಥಳ ಬದಲಾಗಿದೆ.
ಈ ಬೆನ್ನಲ್ಲೇ ಯುವ ದಸರಾ ವೀಕ್ಷಣೆಗೆ ಟಿಕೆಟ್ ನಿಗದಿಗೊಳಿಸಿರುವ ಬಗ್ಗೆ ಮಾಹಿತಿ ಹೊರ ಬಂದಿದೆ. ಯುವ ದಸರಾ ಕಾರ್ಯಕ್ರಮದ ವೇದಿಕೆ ಬಳಿ ವಿಶೇಷ ಐಷಾರಾಮಿ ಆಸನದ ವ್ಯವಸ್ಥೆ ಮಾಡಲು ಉದ್ದೇಶಿಸಿದ್ದು, ಇದಕ್ಕಾಗಿ 5000 ರೂಗಳ ಟಿಕೆಟ್ ನಿಗದಿ ಮಾಡಲಾಗಿದೆ ಎಂಬ ಮಾಹಿತಿ ಹೊರಬಂದಿದೆ.
ವಿಶೇಷವೆಂದರೆ ಈ ವರ್ಷದ ಯುವ ದಸರಾ ಕಾರ್ಯಕ್ರಮದಲ್ಲಿ ತಮಿಳು ಚಲನಚಿತ್ರರಂಗದ ಸಂಗೀತ ಮಾಂತ್ರಿಕ ಇಳಯರಾಜ ಹಾಗೂ ರೆಹಮಾನ್ ಅವರನ್ನು ಆಹ್ವಾನಿಸುವ ಸಂಬಂಧ ಮಾತುಕತೆ ನಡೆದಿದೆ ಎನ್ನಲಾಗಿದೆ.
ದುಬಾರಿ ಸಂಗೀತಗಾರರಾದ ಈ ಇಬ್ಬರನ್ನು ಯುವ ದಸರಾ ವೇದಿಕೆಯಲ್ಲಿ ಕಾರ್ಯಕ್ರಮ ನೀಡಲು ಆಹ್ವಾನಿಸುತ್ತಿರುವ ಕಾರಣ ಹೆಚ್ಚುವರಿ ಆರ್ಥಿಕ ಹೊರೆಯನ್ನು ಟಿಕೆಟ್ ಮಾರಾಟದ ಮೂಲಕ ಭರಿಸಲು ಜಿಲ್ಲಾಡಳಿತ ಉದ್ದೇಶಿಸಿದೆ ಎನ್ನಲಾಗಿದೆ.
ಇನ್ನು ಮಹಾರಾಜ ಕಾಲೇಜು ಮೈದಾನದಿಂದ ಮೈಸೂರು ಹೊರವಲಯದ ಉತ್ತನಹಳ್ಳಿ ದೇವಸ್ಥಾನದ ಹತ್ತಿರ ಸ್ಥಳ ಬದಲು ಮಾಡಲಾಗಿದೆ. ವಿಶಾಲ ಪ್ರದೇಶವಾಗಿರುವ ಸ್ಥಳದಲ್ಲಿ ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಲಾಗಿದ್ದು, ಈ ಬಾರಿ ಹೆಚ್ಚಿನ ಜನ ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ.