ಮೈಸೂರು: ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸರ್ಕಾರದ ಬಗ್ಗೆ ಬಿಜೆಪಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ಇತ್ತೀಚೆಗೆ ಮೈಸೂರಿನಲ್ಲಿ MDMA ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಇಂದು ಬೆಳಿಗ್ಗೆ ABVP ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರದ ವಿರುದ್ಧ ವಿವಿಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ರಾಜ್ಯದಲ್ಲಿ ಡ್ರಗ್ಸ್ ದಂಧೆಗೆ ಸಂಪೂರ್ಣ ಬ್ರೇಕ್ ಬೀಳಬೇಕು ಎಂದು ಆಗ್ರಹಿಸಿದ್ದರು.
ವಿದ್ಯಾರ್ಥಿಗಳ ಪ್ರತಿಭಟನೆ ನಡೆಯುತ್ತಿದ್ದಂತೆ ರೊಚ್ಚಿಗೆದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು, ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸರ್ಕಾರದ ಬಗ್ಗೆ ಬಿಜೆಪಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ಪ್ರತಿಭಟನಾ ಜಾಥಾ ನಡೆಸಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಬಿಜೆಪಿಯವರು ಮೈಸೂರಿನ ಹೆಸರನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಡ್ರಗ್ಸ್ ತಯಾರಿಸುತ್ತಿದ್ದವರು ಗುಜರಾತ್‌ನವರು. ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರವೇ ಇದೆ. ಮೈಸೂರಿನಲ್ಲಿ ಸಿಕ್ಕಿರುವ 4 ಕೋಟಿ ಮೌಲ್ಯದ ಡ್ರಗ್ಸ್‌ನ್ನು 390 ಕೋಟಿ ಮೌಲ್ಯದ್ದು ಎಂದು ಸುಳ್ಳು ಆರೋಪ ಮಾಡಿ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ.
ವಿದ್ಯಾರ್ಥಿಗಳನ್ನು ಮುಂದಿಟ್ಟುಕೊಂಡು ಬಿಜೆಪಿಯವರು ಎಬಿಬಿಪಿ ಮುಖಾಂತರ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದು ವಿದ್ಯಾರ್ಥಿಗಳನ್ನು ಬಿಜೆಪಿ ಕಾರ್ಯಕರ್ತರನ್ನಾಗಿ ರೂಪಿಸುವ ಕಾರ್ಯಕ್ರಮ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸರ್ಕಾರದ ಬಗ್ಗೆ ವಿಷ ಬೀಜ ಬಿತ್ತುವ ಕೆಲಸ ಮಾಡಲಾಗುತ್ತಿದೆ. ಈ ಹಿಂದೆ ಮೈಸೂರಿನ ಉದಯಗಿರಿಯಲ್ಲಿ ನಡೆದ ಸಣ್ಣ ಗಲಾಟೆಯನ್ನು ರಾಜ್ಯಾದ್ಯಂತ ಅನ್ಯಧರ್ಮೀಯರ ವಿರುದ್ಧ ಎತ್ತಿಕಟ್ಟುವ ಕೆಲಸವಾಗಿತ್ತು. ಈಗ ಡ್ರಗ್ಸ್ ವಿಚಾರದಲ್ಲೂ ಅದೇ ರೀತಿ ಆಗುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.





