ಮೈಸೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಬಿಜೆಪಿ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದು ಸತ್ಯ. ನಾನು ಆ ಸಂದರ್ಭದಲ್ಲಿ ಸದನದಲ್ಲೇ ಇದ್ದೆ ಎಂದು ವಿಧಾನ ಪರಿಷತ್ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು(ಡಿಸೆಂಬರ್.23) ಸಿ.ಟಿ.ರವಿ ಅವರ ಆಕ್ಷೇಪಾರ್ಹ ಹೇಳಿಕೆಗಳಿಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿ.ಟಿ.ರವಿ ಅವರು ಆ ಮಾತು ಹೇಳಿದ್ದು ಸತ್ಯ. ಆ ಮಾತನ್ನು ಕೇಳಿಸಿಕೊಂಡು ಒಂದು ಕ್ಷಣ ನಾನೇ ಗಾಬರಿಯಾಗಿದ್ದು, ಇಂತಹ ಪದಗಳನ್ನು ಬಳಸುತ್ತಿದ್ದರಲ್ಲಾ ಎಂದುಕೊಂಡೆ. ಆದರೆ ಸಿ.ಟಿ.ರವಿ ಅವರು ನಾನು ಆ ಪದವನ್ನು ಬಳಸಿಯೇ ಇಲ್ಲವೆಂದು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಸದನದಲ್ಲಿ ಸಿ.ಟಿ.ರವಿ ಅವರು ಬಳಸಿದ್ದು ಫ್ರಸ್ಟ್‌ರೇಟ್ ಎಂಬ ಪದವಲ್ಲ, ಅವರು ಬಳಸಿದ್ದು ಆಕ್ಷೇಪಾರ್ಹ ಹೇಳಿಕೆ. ಆ ಹೇಳಿಕೆಗಳಿಗೆ ನಾನೇ ಸಾಕ್ಷಿ, ಆದರೆ ಇದೀಗ ಅನುಕಂಪಗಿಟ್ಟಿಸಿಕೊಳ್ಳಲು ರವಿ ನಾಟಕ ಮಾಡುತ್ತಿದ್ದಾರೆ. ಅಲ್ಲದೇ ಪೊಲೀಸರು, ಸಿ.ಟಿ.ರವಿ ಎನ್‌ಕೌಂಟರ್‌ಗೆ ಯತ್ನಿಸಿದ್ದಾರೆ ಎಂದು ಆರೋಪಿಸುತ್ತಿರುವ ಬಿಜೆಪಿ ನಾಯಕರ ಹೇಳಿಕೆ ಶುದ್ಧ ನಾಟಕ. ಬಿಜೆಪಿಯವರು ಈ ವಿಚಾರದಲ್ಲಿ ನೀಡುತ್ತಿರುವ ಹೇಳಿಕೆಗಳೆಲ್ಲಾ ಕೇವಲ ನಾಟಕ ಎಂದು ವ್ಯಂಗ್ಯವಾಡಿದ್ದಾರೆ.