ಮೈಸೂರು: ಮೈಸೂರು ಪಾಕ್‌ಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ಮೈಸೂರು ಪಾಕ್ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕ ಎನ್ನುವ ಪದ ಸಂಸ್ಕೃತ.
ಪಾಕ ಎಂದರೆ ಸಿಹಿ ಎಂದರ್ಥ ಬರುತ್ತದೆ. ಪಾಕ್ ಎಂಬ ಪದ ಇದೆ ಎಂದು ಅದನ್ನು ಬದಲಾಯಿಸುವುದು ಸರಿಯಲ್ಲ. ಮೈಸೂರು ಪಾಕ್‌ಗೆ ಎಷ್ಟೋ ವರ್ಷಗಳ ಇತಿಹಾಸ ಇದೆ. ಅದೇ ರೀತಿ ಮಾಡುತ್ತಾ ಹೋದರೆ ಈಗ ಎಷ್ಟೋ ಹೆಸರುಗಳನ್ನು ಬದಲಾಯಿಸಬೇಕಾಗುತ್ತದೆ. ಅದೆಲ್ಲ ಈಗ ಅಪ್ರಸ್ತುತ ಎಂದರು.
ಇನ್ನು ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ರಾಯಭಾರಿಯಾಗಲು ನಿರಾಸಕ್ತಿ ತೋರಿಸಿದ ಅವರು, ನಾನು ರಾಯಭಾರಿ ಆಗಲ್ಲ. ಅದರ ಬಗ್ಗೆ ನನಗೆ ಆಸಕ್ತಿನೂ ಇಲ್ಲ. ನಾನು ಜನಸೇವಾ ಕ್ಷೇತ್ರದಲ್ಲಿದ್ದೇನೆ. ಹಾಗಾಗಿ ರಾಯಭಾರಿ ಆಗಲು ಹೋಗಲ್ಲ. ನನ್ನ ಕೆಲಸವೇ ಬೇಕಾದಷ್ಟು ಇದೆ. ಮೈಸೂರು ಸ್ಯಾಂಡಲ್ ಸೋಪಿಗೆ ಅದರದೇ ಆದ ಐತಿಹ್ಯವಿದೆ. ಅದಕ್ಕೆ ದೇಶಾದ್ಯಂತ ತನ್ನದೇ ಆದ ಮಾರುಕಟ್ಟೆ ಇದೆ. ದೇಶದ ಮಟ್ಟದಲ್ಲಿ ಪ್ರಸಿದ್ಧಿಯಾಗಿರುವ ಕನ್ನಡದ ಕಲಾವಿದರಿಂದ ಜಾಹೀರಾತು ಕೊಡಿಸಲಿ. ಅನ್ಯ ಭಾಷೆಯ ಕಲಾವಿದರಿಗೆ ಹೆಚ್ಚು ಸಂಭಾವನೆ ಕೊಟ್ಟು ರಾಯಭಾರಿಯಾಗಿಸುವ ಅಗತ್ಯ ಇಲ್ಲ ಎಂದು ಹೇಳಿದರು.





