ಮೈಸೂರು: ಭಾರತ ದೇಶವನ್ನು ಒಂದೇ ಒಂದು ಧರ್ಮದ ರಾಷ್ಟ್ರವಾಗಿ ಮಾಡಲು ನಾವು ಯಾವುದೇ ಕಾರಣಕ್ಕೂ ಬಿಡಬಾರದೆಂಬ ಹೇಳಿಕೆಯ ಮೂಲಕ ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಹಿಂದೂ ರಾಷ್ಟ್ರ ಪರಿಕಲ್ಪನೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ಭಾರತವು ವಿವಿಧ ಜಾತಿ, ಧರ್ಮ, ಸಂಸ್ಕೃತಿಯಿಂದ ಕೂಡಿರುವ ದೇಶವಾಗಿದೆ. ಆದರೆ ಕೆಲ ರಾಜಕೀಯ ಗುಂಪುಗಳು ಕೇವಲ ರಾಜಕೀಯ ಲಾಭಕ್ಕಾಗಿ ಹಿಂದೂ ಧರ್ಮದ ರಾಷ್ಟ್ರವನ್ನಾಗಿಸಲು ಹೊರಟಿದ್ದಾರೆ. ಅದನ್ನು ನಾವೆಲ್ಲರೂ ವಿರೋಧಿಸಬೇಕು. ಇಲ್ಲವಾದರೆ ಒಂದು ಧರ್ಮದ ರಾಷ್ಟ್ರವಾಗಿ ಉಳಿಯುತ್ತದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ಹಿಂದೂ ರಾಷ್ಟ್ರ ನಿರ್ಮಾಣ ಅಸಾಧ್ಯ. ಏಕೆಂದರೆ ಸಂವಿಧಾನದ ಪೀಠಿಕೆಯಲ್ಲಿ ಎಲ್ಲಾ ಜನಾಂಗದ ಹಾಗೂ ಧರ್ಮದ ಹಕ್ಕು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ ಎಂಬಂತೆ ಉಲ್ಲೇಖಿಸಿದೆ. ಅಲ್ಲದೇ ನಮ್ಮ ದೇಶದ ಸಂವಿಧಾನ ಕಠಿಣವಾಗಿದೆ. ಭಾರತವನ್ನು ಒಂದು ಧರ್ಮದ ರಾಷ್ಟ್ರ ಮಾಡಲು ಹೊರಟಿರುವುದು ಅಪಾಯಕಾರಿಯಾಗಿದೆ. ಹೀಗಾಗಿ ಸಂವಿಧಾನವನ್ನು ರಕ್ಷಣೆ ಮಾಡಬೇಕೆಂದು ಹೇಳಿದರು.
ಇನ್ನು, ಕೆಲವು ಜನರು ನಮ್ಮ ದೇಶವನ್ನು ಒಂದು ಧರ್ಮದ ರಾಷ್ಟ್ರವಾಗಬೇಕೆಂದು ಬಯಸುತ್ತಿದ್ದಾರೆ. ಆದರೆ ಬಹುಸಂಖ್ಯಾತ ಜನರು ಸ್ನೆಹ-ಸೌಹಾರ್ದತೆಯಿಂದ ಹಾಗೂ ಸೋದರರಂತೆ ಜೀವಿಸಬೇಕೆಂದು ಆಶಯ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಭಾರತಕ್ಕೆ ಹಿಂದೂ ರಾಷ್ಟ್ರದ ಪರಿಕಲ್ಪನೆ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಭಾರತ ಕೇವಲ ಹಿಂದುತ್ವದ ರಾಷ್ಟ್ರವಾದರೆ ಅದಕ್ಕಿಂತ ದೊಡ್ಡ ಅಪಾಯ ಮತ್ತೊಂದಿಲ್ಲ. ದೇಶದಲ್ಲಿ ಎಲ್ಲಾ ಸಮುದಾಯಗಳ ಜನರು ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ. ಅಂತಹವರನ್ನು ಮೇಲೆತ್ತುವ ಕೆಲಸವನ್ನು ಸರ್ಕಾರ ಮಾಡಬೇಕು. ದೇಶದಲ್ಲಿ ಎಲ್ಲಾ ಜನಾಂಗ ಮತ್ತು ಸಮುದಾಯದವರು ಅಭಿವೃದ್ಧಿಯಾದರೆ ಮಾತ್ರ ಭಾರತವೂ ಸಮಗ್ರವಾಗಿ ಅಭಿವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.