ಮೈಸೂರು: ಕೆಆರ್‌ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ಇಟ್ಟೇ ಇಡುತ್ತೇವೆ ಎಂದು ಕಾಂಗ್ರೆಸ್ ಶಾಸಕ ಹರೀಶ್ ಗೌಡ ಹೇಳಿದ್ದಾರೆ.
ನಗರದಲ್ಲಿ ಇಂದು (ಫೆ.19) ಮಾತನಾಡಿದ ಅವರು, ಆ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡದೇ ಬೇರೆ ಯಾರ ಹೆಸರಿಡಬೇಕು. ಮಹಾರಾಜರ ನಂತರ ಮೈಸೂರು ಅಭಿವೃದ್ದಿಗೆ ಅಪಾರ ಕೊಡುಗೆ ನೀಡಿರುವುದು ಸಿದ್ದರಾಮಯ್ಯ ಅವರು. ಆ ರಸ್ತೆಯಲ್ಲಿರುವ ಜಯದೇವ, ಜಿಲ್ಲಾಸ್ಪತ್ರೆ, ಇಎಸ್‌ಐ ಆಸ್ಪತ್ರೆ ರಿನೋವೇಷನ್, ಸ್ಯಾನಿಟೋರಿಯಂ ಆಸ್ಪತ್ರೆ ಸೇರಿದಂತೆ ಹಲವಾರು ಆಸ್ಪತ್ರೆಗಳ ಅಭಿವೃದ್ದಿ ಮಾಡಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ ಅವರೇ ರಸ್ತೆಯ ವಿಚಾರದಲ್ಲಿ ಸುಮ್ಮನೆ ವಿವಾದ ಸೃಷ್ಠಿಸೋದು ಬೇಡ ಅಂತ ಹೇಳಿದ್ದಾರೆ. ಆದರೂ, ಸಂಸದ ಯದುವೀರ್ ಅವರಿಗೂ ಕೂಡ ಮನವಿ ಮಾಡಿದ್ದೇವೆ. ಎಲ್ಲರಿಗೂ ಮನವರಿಕೆ ಮಾಡಿ ಆ ರಸ್ತೆಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರಿಡುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಸಿಎಂ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಆಗಿರಬೇಕು. ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಚುನಾವಣೆಯಲ್ಲಿ ನಮಗೆ ಪೂರಕವಾದ ಫಲಿತಾಂಶ ಬರಬೇಕು ಅಂದ್ರೆ ಡಿಕೆ ಶಿವಕುಮಾರ್ ಅಧ್ಯಕ್ಷರಾಗಿರಬೇಕು ಎಂದರು.





