ಮೈಸೂರು : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ನಿನ್ನೆ(ಜ.6) ಇಂಗಿತ ವ್ಯಕ್ತಪಡಿಸಿದ್ದ ಮಾಜಿ ಸಂಸದ ಪ್ರತಾಪ್ ಸಿಂಹಗೆ ಮಾಜಿ ಶಾಸಕ ಎಲ್.ನಾಗೇಂದ್ರ ತೀರುಗೇಟು ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ನಾಗೇಂದ್ರ, ಟಿಕೆಟ್ ಯಾರಿಗೆ ಕೊಡಬೇಕೆಂದು ನಿರ್ಧರಿಸುವುದು ಹೈಕಮಾಂಡ್. ಪ್ರತಾಪ್ ಸಿಂಹಗೆ ಅದರ ಬಗ್ಗೆ ಅರಿವಿರಬೇಕು. ಯಾವ ಕಾರಣಕ್ಕೆ ಆ ರೀತಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ನಾನು ಪಕ್ಷದ ಸಂಘಟನೆಗಾಗಿ ದುಡಿಯುತ್ತಿದ್ದೇನೆ. ನನ್ನ ಬಗ್ಗೆ ಯಾವ ಆಪಾದನೆಗಳಿಲ್ಲ. ನಾನು ಕೋರ್ಟ್‌ನಿಂದ ಯಾವುದೇ ತಡೆಯಾಜ್ಞೆ ತಂದು ರಾಜಕಾರಣ ಮಾಡುತ್ತಿಲ್ಲ ಎಂದು ತಿರುಗೇಟು ನೀಡಿದರು.
ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡುವಾಗಲೂ ಹೀಗೆಯೇ ಹೇಳಿದ್ದರು. ಪಾರ್ಲಿಮೆಂಟ್ ಟಿಕೆಟ್ ಯಾಕೆ ಅವರಿಗೆ ಸಿಗಲಿಲ್ಲ. ನನ್ನ ಕ್ಷೇತ್ರದ ಜೊತೆಗೆ ನಾಲ್ಕು ಕ್ಷೇತ್ರ ಗೆಲ್ಲಿಸಬೇಕಿದೆ. ನಮ್ಮ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ನಾನು ಕಡಿಮೆ ಅಂತರದಲ್ಲಿ ಸೋತಿದ್ದೇನೆ. ಪಕ್ಷದ ಇತಿಮಿತಿ ಮೀರಿ ಯಾರೂ ವರ್ತಿಸಬಾರದು. ಸಾರ್ವಜನಿಕರಿಗೆ ಯಾರೂ ಗೊಂದಲ ಮೂಡಿಸಬೇಡಿ. ಟಿಕೆಟ್ ಯಾರಿಗೆ ಕೊಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ತಿಳಿಸಿದರು.
ಕಳೆದ ಲೋಕಸಭೆ, ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಬರಲಿಲ್ಲ. ಕಳೆದ ಬಾರಿ ಯದುವೀರ್ ಅವರಿಗೆ ೫೬,೫೦೦ ಮತ ನೀಡಿದ್ದೇವೆ. ಅವರೊಬ್ಬ ಹಿಂದು ಹುಲಿ ಇದ್ದೀನಿ ಅಂತಾರೆ. ಅವರು ರಾಜ್ಯನಾಯಕರಾಗಿ ಬೆಳೆದಿದ್ದಾರೆ. ಅವರು ಬೇರೆ ಎಲ್ಲಾದರೂ ಸ್ಪರ್ಧೆ ಮಾಡಲಿ. ಅವರು ಬೇರೆ ಊರಿನಿಂದ ಬಂದವರು. ನಾನು ಇದೇ ಊರಿನವನು, ಬೇರೆ ಕಡೆ ಹೋಗಲು ಆಗಲ್ಲ ನನ್ನ ಹುಟ್ಟೂರಿನಲ್ಲೇ ನನ್ನ ಹೋರಾಟ ಎಂದರು.
೨೦೨೮ರ ಚುನಾವಣೆಗೂ ನನಗೇ ಟಿಕೆಟ್ ಸಿಗುವ ವಿಶ್ವಾಸ ಇದೆ. ಮಂಡಲದ ಅಧ್ಯಕ್ಷರು ಯಾರ ಪರ ಇದ್ದಾರೆ ಒಮ್ಮೆ ಕೇಳಿ. ನನಗೆ ಅವರಿಗಿಂತ ೧೦೦ ರಷ್ಟು ಕಾರ್ಯಕರ್ತರು ಜೊತೆಗಿದ್ದಾರೆ. ನಮ್ಮ ಸಂಬಂಧಿಕರು, ಸ್ನೇಹಿತರು ಎಲ್ಲರೂ ನನ್ನ ಜೊತೆ ಇದ್ದಾರೆ ಎಂದು ತಿರುಗೇಟು ನೀಡಿದರು.





