ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು ಆಯೋಜಿಸಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಮೈಸೂರು ಜಿಲ್ಲಾ ಪಾರಂಪರಿಕ ಸಂರಕ್ಷಣಾ ಸಮಿತಿ ಸದಸ್ಯ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್.ರಂಗರಾಜು ಅವರು, ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಅದರ ಉಳಿವಿಗಾಗಿ ಭಾನುವಾರ ಬೆಳಿಗ್ಗೆ 7.30ಕ್ಕೆ ಚಾಮುಂಡಿಬೆಟ್ಟಕ್ಕೆ ನಡಿಗೆ ಶೀರ್ಷಿಕೆಯಡಿ ಏರ್ಪಡಿಸಿರುವ ಜಾಗೃತಿ ಜಾಥಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು, ಪ್ರಜ್ಞಾವಂತರು, ಹಿರಿಯರು, ಕಿರಿಯರು, ವಿದ್ಯಾರ್ಥಿಗಳು ನಮ್ಮೊಂದಿಗೆ ಸೇರಿಕೊಂಡು ಜಾಗೃತಿ ಆಂದೋಲನವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದ್ದಾರೆ.
ಚಾಮುಂಡಿಬೆಟ್ಟ ಒಂದು ಪ್ರಸಿದ್ಧ ಸ್ವಾಭಾವಿಕ ಉತ್ತಮ ಹಾಗೂ ಶ್ರೇಷ್ಠ ಸ್ಪರ್ಶಕ್ಕೆ ನಿಲುಕುವ ಸಾಂಸ್ಕೃತಿಕ ಪಾರಂಪರಿಕ ಪ್ರದೇಶ ಹಾಗೂ ಜೀವ ವೈವಿಧ್ಯಮಯವಾದ ಪರಂಪರೆಯುಳ್ಳ ತಾಣವಾಗಿದೆ. ಇಲ್ಲಿ ಮೊದಲ ಬಾರಿಗೆ ಗಂಗರು ಮಹಾಬಲೇಶ್ವರ ದೇವಾಲಯವನ್ನು ಕ್ರಿ.ಶ 950ರಲ್ಲಿ ನಿರ್ಮಿಸಿ ಶಾಸನವನ್ನು ಹಾಕಿಸಿ ಮಹಾಬಲೇಶ್ವರ ಬೆಟ್ಟ ಎಂದು ಕರೆದಿದ್ದು, ಈ ದೇವಾಲಯ ಸಂರಕ್ಷಣಾ ಕಾರ್ಯಗಳಿಂದ ಇಂದಿಗೂ ಸುರಕ್ಷಿತವಾಗಿದೆ. ಈವೆರೆಗೂ ಬೆಟ್ಟದಲ್ಲಿ 29 ಶಾಸನಗಳು ದೊರಕಿವೆ. ಮೈಸೂರು ಜಿಲ್ಲೆಯ ಗೆಜೆಟಿಯರ್ ಪ್ರಕಾರ ಚಮರಾಜ ಒಡೆಯರ್(1572-76) ಅವರು ತಮ್ಮ ಪತ್ನಿ ಜೊತೆಯಲ್ಲಿ ಬೆಟ್ಟಕ್ಕೆ ಬಂದಿದ್ದ ವೇಳೆ ಅವರ ತಲೆಗೆ ಸಿಡಿಲು ಬಡಿದು ಕೂದಲು ಮಾತ್ರ ಸುಟ್ಟು ಹೋಗಿದ್ದು ಬಿಟ್ಟರೆ ಬೇರೆ ಯಾವುದೇ ಅನಾಹುತವಾಲ್ಲ. ಈ ಘಟನೆಯ ನಂತರದಲ್ಲಿ ಬೆಟ್ಟದಲ್ಲಿ ಧಾರ್ಮಿಕ ಕಾರ್ಯಗಳು ಹಾಗೂ ಆಚರಣೆಗಳು ಹೆಚ್ಚು ನಡೆಯಲು ಪ್ರಾರಂಭಗೊಂಡು ಮೈಸೂರಿನ ಕೊನೆಯ ರಾಜ ಜಯಚಾಮರಾಜ ಒಡೆಯರ್ ಅವರ ಕಾಲದವರೆಗೂ ಮಾತ್ರವಲ್ಲದೆ, ಇಂದಿಗೂ ಚಾಲ್ತಿಯಲ್ಲಿವೆ. ಇಂತಹ ಪರಂಪರೆಯುಳ್ಳ ಬೆಟ್ಟ ಇಂದು ಧಾರ್ಮಿಕತೆಯ ಹೆಸರಿನಲ್ಲಿ ಪ್ರವಾಸೋದ್ಯಮ ಕೇಂದ್ರ, ವ್ಯಾಪಾರಿ ಕೇಂದ್ರ ಮತ್ತು ಧಾರ್ಮಿಕವಲ್ಲದ ಇತರೆ ಚಟುವಟಿಕೆಗಳಿಂದ ತನ್ನ ಸ್ವರೂಪವನ್ನು ಕಳೆದುಕೊಂಡಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಚಾಮುಂಡಿಬೆಟ್ಟಕ್ಕೆ ಒಂದು ಪ್ರಾಧಿಕಾರವನ್ನು ರಚಿಸಿದ್ದರೂ ಅದಕ್ಕೆ ಸಂಬಂಧಿಸಿದ ತಜ್ಞರನ್ನು ಸದಸ್ಯರನ್ನಾಗಿ ನೇಮಿಸಿಲ್ಲ. ಯಾವುದೇ ಸಂರಕ್ಷಣೆಯ ಕಾರ್ಯಗಳು ನಡೆಯದೆ ವಿಪರೀತವಾದ ಪ್ರವಾಸಿಗರಿಂದ ಬೆಟ್ಟದ ಪರಂಪರೆ, ಸ್ವಚ್ಛತೆ ಹಾಗೂ ಯಾವುದೇ ನಿಯಂತ್ರಣವಿಲ್ಲದೆ ಬೆಳೆಯುತ್ತಿರುವ ಕಟ್ಟಡಗಳ ನಿರ್ಮಾಣ ಮತ್ತು ಯಾರ ಹಂಗಿಲ್ಲದೆ ಬೆಳೆಯುತ್ತಿರುವ ಸಣ್ಣ ಪುಟ್ಟ ವ್ಯಾಪಾರಸ್ಥರ ಗುಂಪು ಇತ್ಯಾದಿಗಳಿಂದ ಚಾಮುಂಡಿಬೆಟ್ಟದ ಪರಂಪರೆಗೆ ಧಕ್ಕೆಯಾದರೂ ಯಾವುದೇ ವೈಜ್ಞಾನಿಕ ನಿಯಂತ್ರಣಗಳಿಲ್ಲದಂತಾಗಿದೆ. ಹೀಗಾಗಿ ಜ.4ರಂದು ನಡೆಯುವ ಜಾಗೃತಿ ಆಂದೋಲನಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.




