ಪ್ರಶಾಂತ್ ಎನ್ ಮಲ್ಲಿಕ್
ಮೈಸೂರು: ನಾಡಿನಾದ್ಯಂತ ರಾಮನವಮಿಯ ಅಂಗವಾಗಿ ರಾಮನಿಗೆ ವಿವಿಧ ಪೂಜಾ ಕೈಂಕರ್ಯಗಳು ಮುಂಜಾನೆಯಿಂದಲೂ ಜರುಗುತ್ತಿವೆ. ರಾಮನವಮಿ ಎಂದ ಕ್ಷಣ ಮಜ್ಜಿಗೆ, ಪಾನಕ, ಹೆಸರುಬೇಳೆ ಕೋಸಂಬರಿಯನ್ನು ವಿತರಣೆ ಮಾಡುವುದು ವಿಶೇಷವಾಗಿರುತ್ತದೆ. ಆಂಜನೇಯ ದೇವಸ್ಥಾನ ಹಾಗೂ ರಾಮನ ಮೂರ್ತಿ ದೇವಸ್ಥಾನಗಳಲ್ಲಿ ಇಂದು ವಿಶೇಷ ಪೂಜೆಗಳು ಅದ್ದೂರಿಯಾಗಿ ಜರುಗಿದೆ. ಸಾರ್ವಜನಿಕರು ದೇವರ ದರ್ಶನವನ್ನು ಪಡೆದು ಮಜ್ಜಿಗೆ ಪಾನಕ ಸೇವಿಸಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.
ಮೈಸೂರಿನ ಹತ್ತನೇ ತರಗತಿ ವಿದ್ಯಾರ್ಥಿ ಹಾಗೂ ಮೈಸೂರುನ ಬಾಲಕ ವಿಶ್ರುತ್ ಎ ಧನ್ಯ ಅವರು ರಾಮನವಮಿ ಅಂಗವಾಗಿ ಸ್ಯಾಕ್ಸೋಫೋನ್ ಮೂಲಕ ಶ್ರೀ ತ್ಯಾಗರಾಜರ ರಚನೆಯ “ರಾಮನಾಮಂ ಭಜರೆ ಮಾನಸ” ಮಧ್ಯಮಾವತಿ ರಾಗ, ಆದಿ ತಾಳ ಹಾಗೂ ಶ್ರೀ ತ್ಯಾಗರಾಜರ ರಚನೆ “ಬಂಟುರೀತಿ’ ಹಂಸನಾದ ರಾಗ ಆದಿತಾಳ ಸಂಗೀತವನ್ನು ನುಡಿಸಿ ಸಂಗೀತದ ಮೂಲಕವೇ ರಾಮನಿಗೆ ನಮನ ಸಲ್ಲಿಸಿದ್ದಾರೆ. ಸಂಗೀತವಂತೂ ಅದ್ಭುತವಾಗಿ ಮೂಡಿಬಂದಿದೆ.
ವಿಶ್ರುತ್ ಅವರು ಸಂಗೀತ ಮಾತ್ರವಲ್ಲ ಯಕ್ಷಗಾನ, ತಬಲಾ, ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತು ಕಾರ್ಯಕ್ರಮಗಳಿಗೂ ಸಹ ಪ್ರದರ್ಶನ ಮಾಡಿದ್ದಾರೆ. ಎಂಟು ವರ್ಷಗಳಿಂದ ಸ್ಯಾಕ್ಸೋಫೋನ್ ಮ್ಯೂಸಿಕ್ ಅನ್ನು ಸಹ ಕಲಿತು ನುಡಿಸುತ್ತಿದ್ದಾರೆ.