ಮೈಸೂರು: ನೆರೆಯ ಆಂಧ್ರದಲ್ಲಿ ರಾಜ್ಯದ ತೋತಾಪುರಿ ಮಾವಿನಕಾಯಿ ನಿಷೇಧ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಂಧ್ರದಲ್ಲಿ ರಾಜ್ಯದ ತೋತಾಪುರಿ ಮಾವಿನಕಾಯಿ ನಿಷೇಧ ಮಾಡಿರುವುದು ಖಂಡನೀಯ. ಈಗ ರೈತರಿಗೆ ಗಂಭೀರವಾದ ಪರಿಸ್ಥಿತಿ ಎದುರಾಗಿದೆ. ಲಕ್ಷಾಂತರ ರೂಪಾಯಿ ಮಾವಿನಕಾಯಿ ದೇಶದಿಂದ ದೇಶಕ್ಕೆ ಹೋಗುತ್ತವೆ. ಶ್ರೀನಿವಾಸಪುರದಲ್ಲಿ ತೋತಾಪುರಿ ಹೆಚ್ಚಾಗಿ ಬೆಳೆಯುತ್ತಾರೆ. ಆಂಧ್ರದ ತಿರುಪತಿ ದೇವಸ್ಥಾನಕ್ಕೆ ನಮ್ಮ ರಾಜ್ಯ 40% ಜನ ಹೋಗುತ್ತಾರೆ. ಅಲ್ಲಿನ ಲಡ್ಡುಗೆ ನಮ್ಮ ನಂದಿನಿ ತುಪ್ಪ ಕೊಡುತ್ತಿದ್ದೇವೆ. ಗಂಧದ ಮರವನ್ನು ಸಹ ಕೊಟ್ಟಿದ್ದೇವೆ. ಇಷ್ಟಿದ್ದರೂ ನಮ್ಮ ಮಾವಿನಕಾಯಿ ನಿಷೇಧ ಮಾಡಿದ್ದಾರೆ. ಇದನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ನಾವು ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇನ್ನು ಸಿದ್ದರಾಮಯ್ಯ ಖಡಕ್ ರಾಜಕಾರಣಿ. ಎರಡನೇ ಬಾರಿ ಸಿಎಂ ಅದ ಮೇಲೆ ಮೊದಲಿದ್ದ ಗತ್ತು ಗಮ್ಮತ್ತು ಸಿದ್ದರಾಮಯ್ಯರಿಗೆ ಇಲ್ಲ. ಸಿದ್ದರಾಮಯ್ಯ ವೈಯಕ್ತಿಕವಾಗಿ ಒಳ್ಳೆಯ ಮನುಷ್ಯ. ಆದರೆ ಈಗ ಆಡಳಿತದಲ್ಲಿ ಯಾಕೋ ಗತ್ತು ಗಮ್ಮತ್ತು ಕಾಣಿಸುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಗ್ಗೆ ಸಾಫ್ಟ್ ಕಾರ್ನರ್ ತೋರಿದರು.
ಇನ್ನು ಚಾಮುಂಡಿಬೆಟ್ಟದಲ್ಲಿ ಆಷಾಢ ಮಾಸದಲ್ಲಿ 2 ಸಾವಿರ ರೂಪಾಯಿ ಟಿಕೆಟ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, 2 ಸಾವಿರ ರೂಪಾಯಿ ಟಿಕೆಟನ್ನು ಈ ಕೂಡಲೇ ರದ್ದು ಮಾಡಬೇಕು. ಜನ ಸಾಮಾನ್ಯರಿಗೆ ಅವಕಾಶ ಮಾಡಿಕೊಡಬೇಕು. ಅದನ್ನು ಬಿಟ್ಟು ದುಡ್ಡಿಗಾಗಿ, ಶ್ರೀಮಂತರಿಗೆ ಟಿಕೆಟ್ ಮಾಡಿ ಕರೆದುಕೊಂಡು ಹೋಗುವುದು ಸರಿಯಿಲ್ಲ. ಚಾಮುಂಡೇಶ್ವರಿ ಸನ್ನಿಧಿಯಲ್ಲಿ ವ್ಯಾಪಾರೀಕರಣ ಮಾಡೋದು ಸರಿಯಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.





